ಇದು ತಾಲೂಕಿನ ಕೇಸೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಲಕ್ಷ್ಮೀ ಪಾಟೀಲ ಪರಿಸ್ಥಿತಿ. ಕಳೆದ ವರ್ಷ ಮೇ ತಿಂಗಳಿನಲ್ಲಿ ಅಂಗನವಾಡಿ ಕೇಂದ್ರದ ಸಹಾಯಕಿ ಬಡ್ತಿ ಹೊಂದಿ ವರ್ಗಾವಣೆಯಾಗಿದ್ದಾರೆ

ಪರಶಿವಮೂರ್ತಿ ಮಾಟಲದಿನ್ನಿಕುಷ್ಟಗಿ

ಅಂಗವಿಲಕ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕಳೆದ ಹತ್ತು ತಿಂಗಳಿನಿಂದ ತಮ್ಮ ಜವಾಬ್ದಾರಿ ಜತೆಗೆ ಸಹಾಯಕಿಯ ಕಾರ್ಯವನ್ನೂ ನಿಭಾಯಿಸುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹಾಯಕಿಯನ್ನು ನೇಮಿಸದ ಹಿನ್ನೆಲೆಯಲ್ಲಿ ತೀವ್ರ ತೊಂದರೆ ಎದುರಿಸುವಂತಾಗಿದೆ.

ಹೌದು. ಇದು ತಾಲೂಕಿನ ಕೇಸೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಲಕ್ಷ್ಮೀ ಪಾಟೀಲ ಪರಿಸ್ಥಿತಿ. ಕಳೆದ ವರ್ಷ ಮೇ ತಿಂಗಳಿನಲ್ಲಿ ಅಂಗನವಾಡಿ ಕೇಂದ್ರದ ಸಹಾಯಕಿ ಬಡ್ತಿ ಹೊಂದಿ ವರ್ಗಾವಣೆಯಾಗಿದ್ದಾರೆ. ಖಾಲಿಯಾದ ಸಹಾಯಕಿ ಹುದ್ದೆ ತುಂಬಲು ಇಲಾಖೆ ವಿಳಂಬ ಮಾಡುತ್ತಿದೆ.

ಕಳೆದ ಹತ್ತು ತಿಂಗಳಿಂದ ಸಹಾಯಕಿ ಇಲ್ಲದೆ ಕೇಂದ್ರದ ಸಂಪೂರ್ಣ ಜವಾಬ್ದಾರಿ ಕಾರ್ಯಕರ್ತೆ ಜಯಲಕ್ಷ್ಮೀ ಪಾಟೀಲ ಒಬ್ಬರೆ ನಿಭಾಯಿಸುತ್ತಿದ್ದಾರೆ.

39 ಮಕ್ಕಳು:

ಅಂಗನವಾಡಿ ಕೇಂದ್ರದಲ್ಲಿ ಒಟ್ಟು 39 ಮಕ್ಕಳು ಇದ್ದು, ಈಗ ಹೊಸದಾಗಿ ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡಿರುವ ಎಲ್‌ಕೆಜಿ, ಯುಕೆಜಿ ತರಗತಿಗೆ ಕೆಲಮಕ್ಕಳು ಹೋಗಿದ್ದಾರೆ. ಇನ್ನುಳಿದ ಮಕ್ಕಳಲ್ಲಿ ದೈನಂದಿನ ಸುಮಾರು 15 ಮಕ್ಕಳು ಹಾಜರಾಗುತ್ತಿದ್ದು, ಅಂಗನವಾಡಿ ಕೇಂದ್ರವೂ ಮುಖ್ಯ ರಸ್ತೆಯ ಪಕ್ಕದಲ್ಲಿಯೆ ಇರುವ ಕಾರಣ ಮಕ್ಕಳನ್ನು ಕಾಯುವುದು ದೊಡ್ಡ ಸವಾಲಿನ ಕೆಲಸವಾಗಿದೆ.

ಹೆಚ್ಚುವರಿ ಜವಾಬ್ದಾರಿ: ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಒಬ್ಬರೆ ಮಾಡುತ್ತಿದ್ದು, ಮಕ್ಕಳ ಆರಂಭಿಕ ಕಲಿಕೆ ಮೇಲೂ ದುಷ್ಪರಿಣಾಮ ಬೀರುತ್ತಿದ್ದು ಕಾರ್ಯಕರ್ತೆ ಇಲಾಖೆಯ ಸಭೆ, ಕೇಂದ್ರಕ್ಕೆ ಬರುವ ಆಹಾರ ದಾಸ್ತಾನು, ಪಾತ್ರೆ ತೊಳೆಯುವುದು, ಕೇಂದ್ರದ ಸ್ವಚ್ಛತೆ, ಮಕ್ಕಳ ಸ್ವಚ್ಛತೆ, ಓದು ಬರಹ ಹೇಳಿಕೊಟ್ಟು, ಅಡುಗೆ ಮಾಡಿ ಮಕ್ಕಳಿಗೆ ಊಟ ಕೊಡಬೇಕು, ಮಕ್ಕಳನ್ನು ಮನೆಗೆ ಬಿಟ್ಟು ಬರಬೇಕು. ಮಕ್ಕಳು ಗಲೀಜು ಮಾಡಿಕೊಂಡರೆ ಸ್ವಚ್ಛಗೊಳಿಸುವ ಜತೆಗೆ ಇನ್ನುಳಿದ ಜವಾಬ್ದಾರಿ ನಿರ್ವಹಿಸಬೇಕಾಗಿದ್ದು ಹೆಚ್ಚುವರಿ ಹೊರೆಯಾಗುತ್ತಿದೆ ಎನ್ನಲಾಗಿದೆ.

ಮಕ್ಕಳ ಪಾಲಕರೆ ಆಸರೆ: ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳನ್ನು ಶಾಲೆಗೆ ಕಳುಹಿಸಲು ಬರುವ ಪಾಲಕರು ಕೆಲಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಸ್ವಲ್ಪ ಸಮಯ ಮಕ್ಕಳೊಂದಿಗೆ ಆಟಪಾಠದಲ್ಲಿ ತೊಡಗುವುದು, ಮಕ್ಕಳಿಗೆ ಅಡುಗೆ ಮಾಡುವಲ್ಲಿ, ಪಾತ್ರೆ ತೊಳೆಯುವಲ್ಲಿ, ಸ್ವಚ್ಛಗೊಳಿಸುವುದರಲ್ಲಿ, ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಿರುವುದು ಅಂಗನವಾಡಿ ಕೇಂದ್ರಕ್ಕೆ ''''ಕನ್ನಡಪ್ರಭ'''' ಪ್ರತಿನಿಧಿ ಭೇಟಿ ನೀಡಿದಾಗ ಕಂಡು ಬಂದಿತು.

ಕೇಂದ್ರ ಬಂದ್: ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದಂತೆ ಇಲಾಖೆ ಸಭೆಗಳು ಇದ್ದಲ್ಲಿ ಅಂಗನವಾಡಿ ಕೇಂದ್ರವನ್ನು ಅನಿವಾರ್ಯವಾಗಿ ಬಂದ್ ಮಾಡಿಕೊಂಡು ಹೋಗಬೇಕಿದೆ.

ಕೇಸೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿದ್ದ ಸಹಾಯಕಿ ಬಡ್ತಿ ಹೊಂದಿ ಸುಮಾರು 10 ತಿಂಗಳಾಯಿತು ಅಲ್ಲಿಂದ ಇಲ್ಲಿಯವರೆಗೂ ಕಾರ್ಯಕರ್ತೆ ಮತ್ತು ಸಹಾಯಕಿಯಾಗಿ ಕೆಲಸ ಮಾಡುತ್ತಿರುವೆ. ಒಟ್ಟು 39 ಮಕ್ಕಳು 7 ಜನ ಗರ್ಭಿಣಿಯರು, 7 ಬಾಣಂತಿಯರು ಇದ್ದಾರೆ. ಕಷ್ಟವಾದರೂ ಸಹಿತ ಅಧಿಕಾರಿಗಳು ಹೇಳುವ ಕೆಲಸ ಮಾಡಬೇಕಿರುವುದು ನಮ್ಮ ಕರ್ತವ್ಯ. ಮಕ್ಕಳ ಪಾಲಕರ ಸಹಕಾರ ಬಹುದೊಡ್ಡ ಆಸರೆಯಾಗಿದೆ. ಸಭೆಗಳು ಇದ್ದಲ್ಲಿ ಅಂಗನವಾಡಿ ಕೇಂದ್ರ ಬಂದ್ ಮಾಡಲಾಗುತ್ತದೆ ಎಂದು ಕೇಸೂರು ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಪಾಟೀಲ ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಆನ್‌ಲೈನ್ ಮೂಲಕ ಅರ್ಜಿ ಕರೆಯಬೇಕಿದ್ದು, ಅರ್ಜಿ ಕರೆಯಲು ತಯಾರಿ ನಡೆಸಲಾಗಿದೆ. ಪ್ರಧಾನ ಕಚೇರಿ ಅನುಮತಿಗಾಗಿ ಕಾಯುತ್ತಿದ್ದು, ಆದಷ್ಟು ಶೀಘ್ರದಲ್ಲಿ ಅರ್ಜಿ ಕರೆದು ಹೊಸ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಜಿಲ್ಲಾ ನಿರ್ದೇಶಕ ಪರಶುರಾಮ್ ಶೆಟ್ಟೆಪ್ಪನವರು ತಿಳಿಸಿದ್ದಾರೆ.