ರೋಣ: ಸಿಡಿಪಿಒ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿ‌ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸ್ಥಳೀಯ ಶಾಸಕ‌‌ ಜಿ.ಎಸ್. ಪಾಟೀಲ ನಿವಾಸಕ್ಕೆ ತೆರಳಿ ಶಾಸಕರ ಅನುಪಸ್ಥಿತಿಯಲ್ಲಿ ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಸಿಐಟಿಯು ಸಂಘಟನೆಯ ಗದಗ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ, ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಆಹಾರ ಭದ್ರತಾ ಕಾಯ್ದೆ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಅಡಿ ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿಗಳಲ್ಲಿ ಸರ್ಕಾರದ ಹಲವು ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ಅವಿರತವಾಗಿ ಶ್ರಮಿಸುತ್ತಿದೆ. ಸರ್ವೋಚ್ಚ ನ್ಯಾಯಾಲಯ ಹಾಗೂ ಗುಜರಾತ್ ಉಚ್ಚನ್ಯಾಯಾಲಗಳ ತೀರ್ಪಿನಂತೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕ್ರಮವಾಗಿ 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಘೋಷಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ. ಸ್ಥಾಪಿಸುವ ನಿರ್ಧಾರ ಸ್ವಾಗತಾರ್ಹವಾಗಿದ್ದು, ಅವುಗಳಿಗೆ ಬೇಕಾದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನವನ್ನು ಹೆಚ್ಚಿಸಬೇಕು. ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠ ವೇತನ ಕಾಯ್ದೆ ಅಡಿ ತಂದು ಇಎಸ್ಐ ಮತ್ತು ಪಿಎಫ್ ಸೌಲಭ್ಯ ನೀಡಬೇಕು. ಅಂಗನವಾಡಿ ಮಕ್ಕಳಿಗೆ ಸ್ಥಳೀಯ ಆಹಾರ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು, ಬಿಎಲ್ಒ ಕೆಲಸದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಶಾಸಕರ ಗಮನಕ್ಕೆ ತರಲಾಗುವುದು ಎಂದರು.

ಈ ವೇಳೆ ಗಂಗಮ್ಮ ದ್ಯಾವರಡ್ಡಿ, ಗೀತಾ ಪಾಟೀಲ, ಶಶಿಕಲಾ ಗಾಣಗೇರ, ಸುಶೀಲಾ ಚಲವಾದಿ, ಸುಮಂಗಲಾ ಡಂಬಳ, ಶರಣಮ್ಮ ವಾಲಿ, ಶ್ರೀದೇವಿ ಜಕ್ಕಮ್ಮನವರ, ಗೀತಾ ಕಬರಳ್ಳಿ ಸೇರಿದಂತೆ ಇತರರು ಇದ್ದರು.