ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಸಾಲುಸಾಲು ಹಬ್ಬಗಳು ಬರುತ್ತಿವೆ, ಆದರೆ ಅಂಗನವಾಡಿ ಶಿಕ್ಷಕಿಯರ ಮತ್ತು ಸಹಾಯಕಿಯರ ಮನೆಯಲ್ಲಿ ಮಾತ್ರ ಹಬ್ಬದ ಸಂಭ್ರಮ ಇಲ್ಲ. ಕೃಷ್ಣಾಷ್ಟಮಿ, ಗಣೇಶ ಚತುರ್ಥಿಗಳಂದು ಅವರ ಮನೆಯಲ್ಲಿ ಕನಿಷ್ಟ ಪಾಯಸ ಮಾಡಿ ಉಣ್ಣುವುದಕ್ಕೂ ಸಾಧ್ಯವಾಗಿಲ್ಲ. ಕಾರಣ ಸರ್ಕಾರ ಅವರಿಗೆ 3 ತಿಂಗಳಿಂದ ಗೌರವಧನ ನೀಡಿಲ್ಲ!ಉಡುಪಿ ಜಿಲ್ಲೆಯಲ್ಲಿ 1218 ಅಂಗನವಾಡಿ ಶಿಕ್ಷಕಿಯರು ಮತ್ತು ಅಷ್ಟೇ ಸಂಖ್ಯೆಯ ಸಹಾಯಕಿಯರಿದ್ದಾರೆ. ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರು ಮತ್ತು ತೀರಾ ಬಡ ಕುಟುಂಬದಿಂದ ಬಂದವರಾಗಿದ್ದಾರೆ. ಅದರಲ್ಲೂ ಸಾಕಷ್ಟು ಮಂದಿ ಏಕ ಪೋಷಕ (ಸಿಂಗಲ್ ಪೆರೆಂಟ್ಸ್)ರಿದ್ದಾರೆ. ಅವರು ಸರ್ಕಾರ ಕೊಡುವ ಅಲ್ಪ ಗೌರವ ಧನದಲ್ಲಿ ಮಕ್ಕಳನ್ನು, ಹೆತ್ತವರನ್ನು ಸಾಕಬೇಕಾಗಿದೆ. ಆದರೆ ಸರ್ಕಾರ ಅವರ ಬಗ್ಗೆ ಗೌರವವೇ ಇಲ್ಲದಂತೆ ಕೊಡುವ ಅಲ್ಪ ಮೊತ್ತವನ್ನು ಕೊಡದೇ ಸತಾಯಿಸುತ್ತಿದೆ.
ಚುನಾವಣೆ, ಸರ್ವೆ, ಮಾತೃವಂದನಾ, ಪೋಷಣ್ ಇತ್ಯಾದಿಗಳ ಜೊತೆಗೆ ಇದೀಗ ಗೃಹಲಕ್ಷ್ಮೀಯೂ ಸೇರಿದಂತೆ ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ನೆಪದಲ್ಲಿ ಸರ್ಕಾರ ಕಡ್ಡಾಯವಾಗಿ ಅಂಗನವಾಡಿ ನೌಕರರನ್ನು ಮಳೆ ಬಿಸಿಲೆನ್ನದೇ ಊರೂರು ತಿರುಗಿಸಿ ಬಳಲುವಂತೆ ಮಾಡುತ್ತದೆ. ಆದರೆ ಗೌರವಧನದ ಪ್ರಶ್ನೆ ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಬೊಟ್ಟು ಮಾಡುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅಂಗನವಾಡಿಯ ಶಿಕ್ಷಕಿಯೊಬ್ಬರು.ಜಿಲ್ಲೆಯ ಅಧಿಕಾರಿಗಳನ್ನು ಕೇಳಿದರೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ, ತಕ್ಷಣ ಬಿಡುಗಡೆಯಾಗಲಿದೆ ಎಂದು ಅಸಹಾಯಕರಾಗಿ ಭರವಸೆ ನೀಡುತ್ತಾರೆ. ಕೆಲವು ದಿನಗಳ ಹಿಂದೆ ಅಂಗನವಾಡಿ ನೌಕರರ ರಾಜ್ಯ ಸಂಘವು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅವರನ್ನು ಭೇಟಿಯಾದಾಗ ಅವರು ಗೌರವಧನದಲ್ಲಿ ಕೇಂದ್ರ ಸರ್ಕಾರದ ಶೇ.40 ಪಾಲು ಬಂದಿಲ್ಲ, ರಾಜ್ಯಸರ್ಕಾರದ ಶೇ.60 ಪಾಲು ಸಿದ್ಧವಿದೆ ಎಂದಿದ್ದರು.
ಒಂದೆರಡು ಹಬ್ಬಗಳೇನೋ ಕಳೆದು ಹೋದವು, ಮುಂದೆ ನವರಾತ್ರಿ, ದೀಪಾವಳಿ ಹಬ್ಬಗಳಂದಾದರೂ ಮನೆಯಲ್ಲಿ ಹೊಟ್ಟೆ ತುಂಬಾ ಸಿಹಿ ಊಟ ಮಾಡುವುದಕ್ಕೆ ಗೌರವಧನ ಕೊಡಿ ಎನ್ನುವುದು ಅಂಗನವಾಡಿ ಮಾತೆಯರ ಆಗ್ರಹವಾಗಿದೆ.-------ಸಾಲ ಕಟ್ಟಲಾಗದೇ ಕಣ್ಣೀರು ಹಾಕುತಿದ್ದಾರೆ...
ಕೆಲವರಿಗೆ ಮೇ ತಿಂಗಳ ವರೆಗೆ ಗೌರವಧನ ಬಂದಿದೆ, ಇನ್ನು ಕೆಲವರಿಗೆ ಜುಲೈ ತಿಂಗಳ ವರೆಗೆ ಬಂದಿದೆ. ಯಾಕೆ ಹೀಗೆ ಅಂತ ಕೇಳಿದರೆ ಯಾರಿಗೂ ಗೊತ್ತಿಲ್ಲ. ಮಕ್ಕಳು, ಅನಾರೋಗ್ಯ, ನಿತ್ಯ ಓಡಾಟದ ಖರ್ಚುವೆಚ್ಚಕ್ಕೂ ಹಣ ಇಲ್ಲದೇ ಸಾಲಸೋಲ ಮಾಡಿ, ಈಗ ಅದನ್ನೂ ಹಿಂದಕ್ಕೆ ನೀಡಲಾಗದೇ ನಮ್ಮ ಶಿಕ್ಷಕಿಯರು ಮತ್ತು ಸಹಾಯಕಿಯರು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರ ತಕ್ಷಣ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಭಾರತಿ ಒತ್ತಾಯಿಸಿದ್ದಾರೆ.