ಅಂಗನವಾಡಿಗಳಲ್ಲಿ ಅಗತ್ಯ ಮಾಹಿತಿ ದಾಖಲಿಸಲು ಸ್ಮಾರ್ಟ್ ಫೋನ್‌ಗಳ ಅಗತ್ಯವಿದೆ: ಎಚ್.ಟಿ.ಮಂಜು

| Published : Jun 29 2024, 12:37 AM IST

ಅಂಗನವಾಡಿಗಳಲ್ಲಿ ಅಗತ್ಯ ಮಾಹಿತಿ ದಾಖಲಿಸಲು ಸ್ಮಾರ್ಟ್ ಫೋನ್‌ಗಳ ಅಗತ್ಯವಿದೆ: ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ತಾಲೂಕಿನಲ್ಲಿ 400 ಅಂಗನವಾಡಿ ಕೇಂದ್ರಗಳು ಹಾಗೂ 14 ಮೇಲ್ವಿಚಾರಕಿಯರಿಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ನೀಡಲಾಗುತ್ತಿದೆ. ಮೊಬೈಲ್ ಫೋನ್‌ಗಳಲ್ಲಿ ಆರು ವರ್ಷದ ಒಳಗಿನ ಮಕ್ಕಳ ಮಾಹಿತಿ, ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಟಿಕತೆ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕೈಗೊಂಡ ಕ್ರಮಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕ್ರೂಢೀಕರಿಸಬೇಕಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶಿಕ್ಷಣದ ಪ್ರಾರಂಭಿಕ ಹಂತ ಅಂಗನವಾಡಿಗಳಲ್ಲಿ ಸಮುದಾಯಧಾರಿತ ಚಟುವಟಿಕೆಗಳನ್ನು ತಂತ್ರಾಂಶದ ಮೂಲಕ ದಾಖಲಿಸಲು ಸ್ಮಾರ್ಟ್ ಫೋನ್‌ಗಳ ಅಗತ್ಯವಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಗಳನ್ನು ವಿತರಿಸಿ ಮಾತನಾಡಿ, ಪೋಷಣ್ ಅಭಿಯಾನ್ ಅಡಿಯಲ್ಲಿ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಅಂಗನವಾಡಿ ಕೇಂದ್ರದಲ್ಲಿ ಪ್ರತಿನಿತ್ಯ ನಡೆಯುವ ಚಟುವಟಿಕೆಗಳನ್ನು ಟ್ರ್ಯಾಕರ್‌ನಲ್ಲಿ ಅಳವಡಿಸಿ ಹಾಗೂ ಅಗತ್ಯ ಮಾಹಿತಿಗಳನ್ನು ಸುಲಭವಾಗಿ ಸಂಗ್ರಹಿಸಲು ಅನುಕೂಲವಾಗುವಂತೆ ಈ ಹಿಂದೆಯೇ ಮಾರ್ಗಸೂಚಿ ಹೊರಡಿಸಲಾಗಿತ್ತು ಎಂದರು.

ಇಂದು ತಾಲೂಕಿನಲ್ಲಿ 400 ಅಂಗನವಾಡಿ ಕೇಂದ್ರಗಳು ಹಾಗೂ 14 ಮೇಲ್ವಿಚಾರಕಿಯರಿಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ನೀಡಲಾಗುತ್ತಿದೆ. ಮೊಬೈಲ್ ಫೋನ್‌ಗಳಲ್ಲಿ ಆರು ವರ್ಷದ ಒಳಗಿನ ಮಕ್ಕಳ ಮಾಹಿತಿ, ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಟಿಕತೆ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕೈಗೊಂಡ ಕ್ರಮಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕ್ರೂಢೀಕರಿಸಬೇಕಿದೆ ಎಂದರು.

ನೋಂದಣಿ, ಸೀಮಂತ, ಅನ್ನಪ್ರಾಶನ, ಸುಪೋಷಣೆ ದಿನ ಅರ್ಹ ಮಕ್ಕಳನ್ನು ಅಂಗನವಾಡಿಗೆ ದಾಖಲಿಸುವುದು ಮುಂತಾದ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಈ ಸ್ಮಾರ್ಟ್ ಫೋನ್‌ಗಳನ್ನು ಉಪಯೋಗಿಸಿ ಮಾಹಿತಿಗಳನ್ನು ದಾಖಲಿಸಬೇಕಿದೆ ಎಂದರು.

ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಪೋಷಣ್ ಪಕ್ವಾಡ್ ಹಾಗೂ ಸೆಪ್ಟೆಂಬರ್ ಮಾಹೆಯಲ್ಲಿ ಪೋಷಣ್ ಮಾಸಾಚರಣೆಯನ್ನು ಇತರೆ ಇಲಾಖೆಗಳ ಸಹಯೋಗದೊಂದಿಗೆ ಮಾಡಬೇಕಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಎದೆಗುಂದದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಇಲಾಖೆಗೆ ಹಾಗೂ ತಾಲೂಕಿಗೆ ಗೌರವ ತರುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಅಂಗನವಾಡಿ ಕಾರ್ಯಕರ್ತರ ಕೆಲಸಕ್ಕೆ ನೀಡುತ್ತಿರುವ ಗೌರವಧನ ಕಡಿಮೆ ಇದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯೊಂದಿಗೆ ವೇತನ ಹೆಚ್ಚಳ ಸಂಬಂಧ ಮಾತನಾಡಲಾಗಿದೆ ಎಂದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ, ಕೆಎಂಎಫ್ ಜಂಟಿ ನಿರ್ದೇಶಕ ಅರವಿಂದ್, ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಸತೀಶ್, ಸಿಡಿಪಿಒ ಅರುಣ್‌ಕುಮಾರ್, ವೃತ್ತ ಮೇಲ್ವಿಚಾರಕಿ ಪದ್ಮಮ್ಮ ಸೇರಿದಂತೆ ಹಲವರು ಇದ್ದರು.