ಸಾರಾಂಶ
ಗಣೇಶ್ ತಮ್ಮಡಿಹಳ್ಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗರೈತರ ಜೀವನಾಡಿ ಆಗಿರುವ ಜಾನುವಾರುಗಳ ಸಂರಕ್ಷಣೆ ಹೊಣೆ ಹೊರಬೇಕಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿಯೇ ಶೇ.50ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿದ್ದು, ಇಲಾಖೆ ಸೊರಗಿ ಹೋಗಿದೆ. ಮ೦ಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳನ್ನು ಸರ್ಕಾರ ಈವರೆಗೂ ತುಂಬಿಲ್ಲ.ಜಿಲ್ಲೆಯಲ್ಲಿ 6,38,333 ಜಾನುವಾರುಗಳ ಸಂರಕ್ಷಣೆ ಹೊಣೆ ಹೊತ್ತಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಾರ್ಯ ಚಟುವಟಿಕೆಗಳ ಭಾರ ಹೊರಬೇಕಾದ ಅಗತ್ಯ ಮಾನವ ಸಂಪನ್ಮೂಲವೇ ನಿಗದಿತ ಪ್ರಮಾಣದಕ್ಕಿಂತಲೂ ಕುಸಿದು ಹೋಗಿದೆ. ಇಡೀ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರ ಕೊರತೆ ಜೊತೆಗೆ ಇಲಾಖೆಯ ಕಾರ್ಯ ಚಟುವಟಿಕೆಗಳ ಅನುಷ್ಠಾನ, ಲಸಿಕಾ ಅಭಿಯಾನಗಳಿಗೂ ಕೆಲಸದ ಒತ್ತಡದ ಭಾರ ಹೆಚ್ಚುವಂತೆ ಮಾಡಿದೆ.
ಪಶು ಇಲಾಖೆಯಲ್ಲಿ ಸರ್ಕಾರದ ಹೊಸ ಯೋಜನೆ ಅನುಷ್ಠಾನಕ್ಕೆ ತರಲು ಸಿಬ್ಬಂದಿ ಕೊರತೆ ಇಲಾಖೆಯಲ್ಲಿ ತಲೆದೋರಲಿದೆ. ಇಲಾಖೆಯಲ್ಲಿ ಪ್ರತಿ ವರ್ಷ ಹೊಸ ಯೋಜನೆಗಳು ಸೇರ್ಪಡೆಯಾಗುತ್ತವೆ. ಇರುವ ಸಿಬ್ಬಂದಿಯೇ ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಆದರೆ, ಹೆಚ್ಚಿನ ಕೆಲಸದ ಒತ್ತಡದ ಪರಿಣಾಮ ಅವುಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ.ಜಿಲ್ಲೆಯ ಹಲವು ತಾಲೂಕುಗಳಲ್ಲಿ ಪಶು ಆಸ್ಪತ್ರೆಗಳಿಗೆ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ತೊಂದರೆ ಉಂಟಾಗಿದೆ. ಕುರಿ, ಮೇಕೆ, ದನ ಹಾಗೂ ಕರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಲು ಸಿಬ್ಬಂದಿ ಕೊರತೆಯಿಂದ ಎಷ್ಟೋ ಸಲ ನಿಗದಿತ ಸಮಯಕ್ಕೆ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ಕೃಷಿ ಆಧಾರಿತ ಚಟುವಟಿಕೆಗಳು ಹೆಚ್ಚು. ಇಂತಹ ಕಡೆ ಪಶು ಸಂಗೋಪನೆ ಸೇರಿದಂತೆ ಸರ್ಕಾರದ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡುವ ಹೊಣೆಯೂ ಇಲಾಖೆ ಮೇಲಿದೆ. ಆದರೆ, ಅಂತಹ ಕೆಲಸ ಮಾಡಲು ಇಲಾಖೆಯಲ್ಲಿ ಸಿಬ್ಬಂದಿ ಇಲ್ಲವೆಂದರೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ.ಹುದ್ದೆಗಳು ಖಾಲಿ-ಖಾಲಿ :ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಡಿಯ "ಎ, ಬಿ, ಸಿ, ಡಿ'''''''' ಎಂಬ ನಾಲ್ಕು ದರ್ಜೆಯಲ್ಲಿ ಒಟ್ಟು 685 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ ಕೇವಲ 248 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅ೦ದರೆ, ಬರೊಬ್ಬರಿ 437 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ 6.38 ಲಕ್ಷ ಜಾನುವಾರುಗಳಿದ್ದು, 174 ಪಶು ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.ಜಿಲ್ಲೆಯಲ್ಲಿ ಉಪ ನಿರ್ದೇಶಕರ ಕಚೇರಿಯಲ್ಲೇ 3 ಹುದ್ದೆಗಳು ಖಾಲಿ ಇವೆ. ಇಲ್ಲಿ ಒಟ್ಟು 17 ಹುದ್ದೆಗಳು ಮಂಜುರಾಗಿದ್ದು, 14 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನು ಉಪ ನಿರ್ದೇಶಕರ ಕಚೇರಿ ಪಾಲಿಕ್ಲಿನಿಕ್ ಶಿವಮೊಗ್ಗದಲ್ಲಿ 14 ಮಂಜುರಾದ ಹುದ್ದೆಗಳಿದ್ದು, 7 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 7 ಹುದ್ದೆಗಳು ಖಾಲಿ ಇವೆ.
ಶಿವಮೊಗ್ಗ ತಾಲೂಕಿನಲ್ಲಿ ಒಟ್ಟು 94 ಹುದ್ದೆಗಳು ಮಂಜುರಾಗಿದ್ದು ಅದರಲ್ಲಿ 48 ಹುದ್ದೆಗಳು ಖಾಲಿ ಇವೆ. ಭದ್ರಾವತಿಯಲ್ಲಿ 89 ಹುದ್ದೆಗಳ ಪೈಕಿ 42 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 47 ಹುದ್ದೆಗಳು ಖಾಲಿ ಇವೆ, ತೀರ್ಥಹಳ್ಳಿ 108 ಹುದ್ದೆಗಳ ಪೈಕಿ 31 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಬರೊಬ್ಬರಿ 77 ಹುದ್ದೆಗಳು ಖಾಲಿ ಉಳಿದಿವೆ. ಸೊರಬಲ್ಲಿ 85 ಮಂಜುರಾದ ಹುದ್ದೆಗಳ ಪೈಕಿ ಕೇವಲ 28 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 57 ಹುದ್ದೆಗಳು ಉಳಿದಿವೆ. ಹೊಸನಗರದಲ್ಲಿ 82 ಮಂಜುರಾದ ಹುದ್ದೆಗಳ ಪೈಕಿ 16 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 66 ಹುದ್ದೆಗಳು ಖಾಲಿ ಉಳಿದಿವೆ. ಶಿಕಾರಿಪುರದಲ್ಲಿ 108 ಮಂಜುರಾದ ಹುದ್ದೆಗಳ ಪೈಕಿ 38 ಹುದ್ದೆಗಳು ಭರ್ತಿಯಾಗಿದ್ದು, 70 ಹುದ್ದೆಗಳು ಖಾಲಿ ಉಳಿದಿವೆ. ಸಾಗರದಲ್ಲಿ 85 ಮಂಜುರಾದ ಹುದ್ದೆಗಳ ಪೈಕಿ 21 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 64 ಹುದ್ದೆಗಳು ಖಾಲಿ ಉಳಿದಿವೆ. ಜಿಲ್ಲೆಗೆ ಮಂಜೂರಾತಿ ಇರುವ ಹುದ್ದೆಗಳ ಪೈಕಿ ಅರ್ಧದಷ್ಟು ಖಾಲಿಯಿದ್ದು, ಈ ಹುದ್ದೆಗಳ ಭರ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕೊರತೆಯ ಮಧ್ಯೆಯೂ ಪ್ರಸಕ್ತ ಸಾಲಿನ ಚರ್ಮಗಂಟು ರೋಗ ನಿಯಂತ್ರಣ ಕಾರ್ಯಕ್ರಮದಡಿ 5.92 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ.93 ಸಾಧನೆ ಮಾಡಲಾಗಿದ್ದು, ಇದರ ಜತೆಗೆ ಕಾಲುಬಾಯಿ ರೋಗಕ್ಕೂ ನಿಗದಿತ ಸಮಯಕ್ಕೆ ಲಸಿಕೆ ಹಾಕುವ ಮೂಲಕ ನಿಯಂತ್ರಣದಲ್ಲಿ ಇಡಲಾಗಿದೆ. -ಎ.ಬಾಬುರತ್ನ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ.