ಪ್ರಾಣಿ ಕಲ್ಯಾಣವು ಕೇವಲ ಪ್ರಾಣಿಗಳ ರಕ್ಷಣೆಗಷ್ಟೇ ಸೀಮಿತವಲ್ಲ, ಅದು ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದೆ

ಕೊಪ್ಪಳ: ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಗೆ ಸಮಗ್ರ ಯೋಜನೆ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ ಹೇಳಿದರು.

ಅವರು ಬುಧವಾರ ಕೊಪ್ಪಳ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಬೆಂಗಳೂರು, ಜಿಲ್ಲಾ ಪ್ರಾಣಿ ದಯಾ ಸಂಘ, ಕೊಪ್ಪಳ ಹಾಗೂ ಹ್ಯೂಮೇನ್ ವರ್ಲ್ಡ ಫಾರ್ ಇಂಡಿಯಾ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಶುಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ ಅಂಗವಾಗಿ ವಿಭಾಗ ಮಟ್ಟದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಣಿ ಕಲ್ಯಾಣವು ಕೇವಲ ಪ್ರಾಣಿಗಳ ರಕ್ಷಣೆಗಷ್ಟೇ ಸೀಮಿತವಲ್ಲ, ಅದು ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಪ್ರಾಣಿಗಳ ಮೇಲೆ ಹಿಂಸೆ ತಡೆಯುವುದು ಹಾಗೂ ಅವುಗಳಿಗೆ ಸೂಕ್ತ ಆಶ್ರಯ, ಆಹಾರ ಮತ್ತು ಚಿಕಿತ್ಸೆ ಒದಗಿಸುವುದು ನಮ್ಮ ಸಮಾಜದ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಜನಸಂಖ್ಯೆ ನಿಯಂತ್ರಣ, ನಿಯಮಿತ ಲಸಿಕಾ ಕಾರ್ಯಕ್ರಮ, ರೇಬೀಸ್ ತಡೆ ಹಾಗೂ ಪಶು ವೈದ್ಯಕೀಯ ಶಿಬಿರ ಸಮನ್ವಯದೊಂದಿಗೆ ನಡೆಸುವ ಅಗತ್ಯವಿದೆ ಎಂದರು.

ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವಿವೇಕ ಕಸರಳಿಕರ ತಾಂತ್ರಿಕ ಉಪನ್ಯಾಸ ನೀಡಿ, ಪಶುಗಳ ಉತ್ತಮ ಪೋಷಣೆ ಮತ್ತು ಸ್ವಚ್ಛ ಪರಿಸರವು ಉತ್ಪಾದಕತೆ ಹೆಚ್ಚಿಸುವಲ್ಲಿ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸುತ್ತಾ ಪ್ರಾಣಿ ಕಲ್ಯಾಣ ಸಂಸ್ಥೆಗಳು ಎಡಬ್ಲ್ಯೂಬಿಐ (AWBI)ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ 3000 ರಿಂದ 4000 ಎಡಬ್ಲ್ಯೂಬಿಐ.ಗಳು, 1500 ಗೋಶಾಲೆಗಳು (ಗೋ ಆಶ್ರಯಗಳು), 400 ಎನ್.ಜಿ.ಒ.ಗಳು ನೋಂದಣಿ ಮಾಡಲಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆಗಳ ಪರಿಣಾಮಕಾರಿ ಜಾರಿಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳು ಸಮಗ್ರ ಕಾರ್ಯ ನಿರ್ವಹಿಸಬೇಕು. ಪ್ರಾಣಿ ದಯಾ ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಸಾರ್ವಜನಿಕ ಸಹಭಾಗಿತ್ವದ ಮೂಲಕವೇ ದೀರ್ಘಕಾಲೀನ ಫಲಿತಾಂಶ ಸಾಧಿಸಬಹುದು ಎಂದು ಹೇಳಿದರು.

ರಾಯಚೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (ರಾಜ್ಯವಲಯ) ಜಂಟಿನಿರ್ದೇಶಕ ಡಾ.ರಮೇಶ ದೊಡ್ಡಮನಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಯಲ್ಲಿ ಕರ್ನಾಟಕದ 31 ಜಿಲ್ಲೆಗಳಲ್ಲಿ ಕೊಪ್ಪಳವು ನಂ. 1 ಜಿಲ್ಲೆಯಾಗಿದೆ. ಹಾಗಾಗಿ ವಿಭಾಗ ಮಟ್ಟದ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಕೊಪ್ಪಳ ಜಿಲ್ಲೆಯಿಂದಲೆ ಪ್ರಾರಂಭಿಸಲಾಗಿದೆ. ಜ.14 ರಿಂದ ಫೆ.13 ರವರೆಗೆ ಪಶುಸಂಗೋಪನೆ ಮತ್ತು ಪ್ರಾಣಿ ಕಲ್ಯಾಣ ಮಾಸಾಚರಣೆ ಮಾಡಬೇಕೆಂಬ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯವರ ನಿರ್ದೇಶನದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪ್ರಶಂಸಾ ಪತ್ರ ವಿತರಣೆ:

ಬೀದಿ ನಾಯಿಗಳ ನಿಯಂತ್ರಣದ ಕುರಿತು ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಕಾರ್ಯ ನಿರ್ವಹಿಸಿ ಶೇ.100ರಷ್ಟು ಪ್ರಗತಿ ಸಾಧಿಸಿರುವುದಕ್ಕಾಗಿ ಯಲಬುರ್ಗಾ ಮತ್ತು ಕುಕನೂರು ಪಪಂ ಮುಖ್ಯಾಧಿಕಾರಿ ನಾಗೇಶ ಹಾಗೂ ಕಾರಟಗಿ ಪುರಸಭೆಯ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರಗೆ ಕಾರ್ಯಾಗಾರದಲ್ಲಿ ಪ್ರಶಂಸಾ ಪತ್ರ ವಿತರಣೆ ಮಾಡಲಾಯಿತು.

ಸನ್ಮಾನ: ಪಶುಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ ಅಂಗವಾಗಿ ತಾಂತ್ರಿಕ ತರಬೇತಿ ನೀಡಿದ ಆಹ್ವಾನಿತ ವಿಷಯ ತಜ್ಞರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ.ನಿರ್ಮಲಾ, ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯ ಔಷಧ ಶಾಸ್ತ್ರ ಹಾಗೂ ವಿಷ ಶಾಸ್ತ್ರ ವಿಭಾಗದ ಪ್ರಾದ್ಯಾಪಕ ಡಾ.ಎನ್.ಬಿ. ಶ್ರೀಧರ ಹಾಗೂ ಹ್ಯೂಮೇನ್ ವರ್ಲ್ಡ ಫಾರ್ ಇಂಡಿಯಾ ಫೌಂಡೇಶನ್ ಹಿರಿಯ ತಜ್ಞ ರಮೇಶ ಭಜಂತ್ರಿ, ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ ಹಾಗೂ ಕೊಪ್ಪಳ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಶರಣಬಸಪ್ಪ ರೋಣ ಸೇರಿದಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳ ಪಶು ಉಪನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.