ಅಂಜಲಿ ಹತ್ಯೆ ಆರೋಪಿ ಶೂಟೌಟ್‌ ಮಾಡಿ ಬಿಸಾಡಿ: ಟೆಂಗಿನಕಾಯಿ

| Published : May 16 2024, 12:50 AM IST

ಅಂಜಲಿ ಹತ್ಯೆ ಆರೋಪಿ ಶೂಟೌಟ್‌ ಮಾಡಿ ಬಿಸಾಡಿ: ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಇಂತಹ ಕೃತ್ಯ ಎಸಗಿದವರನ್ನು ಪೊಲೀಸರು ಶೂಟೌಟ್‌ ಮಾಡಿ ಬಿಸಾಡಬೇಕು.

ಹುಬ್ಬಳ್ಳಿ:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎನ್ನುವುದನ್ನು ನೇಹಾ ಮತ್ತು ಅಂಜಲಿ ಕೊಲೆ ಪ್ರಕರಣಗಳೇ ಸಾಕ್ಷೀಕರಿಸುತ್ತಿವೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ, ಇಂಥ ಕೊಲೆಗಡುಕರನ್ನು ಶೂಟೌಟ್‌ ಮಾಡಿ ಬಿಸಾಕಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ ಕಿಮ್ಸ್‌ ಶವಾಗಾರದ ಬಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾ ಕೊಲೆಯಾದಾಗ ಸಿಎಂ, ಗೃಹಸಚಿವರು ನೀಡಿದ ಬೇಜವಾಬ್ದಾರಿಯುತ ಹೇಳಿಕೆಗಳೇ, ಇಂದು ಅಂಜಲಿ ಕೊಲೆ ಮಾಡಿದ ಆರೋಪಿಗೆ ಧೈರ್ಯ, ಪುಷ್ಠಿ ನೀಡಿದಂತಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವವರು ಹೇಳಿಕೆ ನೀಡುವಾಗ ಎಚ್ಚರವಹಿಸಬೇಕು ಎಂದು ಕಿಡಿಕಾರಿದರು.

ಒಂದು ವಾರದ ಹಿಂದೆಯೇ ಆರೋಪಿ ಗಿರೀಶ, ಅಂಜಲಿಗೆ ಕೊಲೆ ಬೆದರಿಕೆ ಹಾಕಿದ್ದ. ಇದನ್ನು ಅವಳ ತಂಗಿ ಮತ್ತು ಅಜ್ಜಿ ಬೆಂಡಿಗೇರಿ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು. ಆಗಲೇ ಪೊಲೀಸರು ಕ್ರಮಕೈಗೊಂಡಿದ್ದರೆ ಅಂಜಲಿ ಕೊಲೆಯಾಗುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಈ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದರು.

ಕೊಲೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಈಗಾಗಲೇ ಅಂಜಲಿ ಕುಟುಂಬದವರ ಜತೆ ಮಾತನಾಡಿ ಧೈರ್ಯ ತುಂಬಿದ್ದೇವೆ. ಇಂತಹ ಕೃತ್ಯ ಎಸಗಿದವರನ್ನು ಪೊಲೀಸರು ಶೂಟೌಟ್‌ ಮಾಡಿ ಬಿಸಾಡಬೇಕು. ಇಂತಹ ಸಮಾಜಘಾತುಕ ಶಕ್ತಿಗಳು ಸಮಾಜಕ್ಕೆ ಮಾರಕ. ನೇಹಾ ಕೊಲೆ ಪ್ರಕರಣವನ್ನು ನಾವು ಹೇಗೆ ವಿರೋಧಿಸಿದ್ದೇವೆಯೋ, ಹಾಗೆಯೇ ಅಂಜಲಿ ಕೊಲೆ ಪ್ರಕರಣವನ್ನೂ ವಿರೋಧಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಟೆಂಗಿನಕಾಯಿ ಪ್ರತಿಕ್ರಿಯಿಸಿದರು.