ಅಂಜಲಿ ಹತ್ಯೆ ಆರೋಪಿ ಗಲ್ಲಿಗೇರಿಸಿ

| Published : May 16 2024, 12:46 AM IST

ಸಾರಾಂಶ

ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು. ಇಲ್ಲವೇ ತಮಗೆ ಹಸ್ತಾಂತರಿಸಿ ನಾವೇ ಶಿಕ್ಷೆ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಹುಬ್ಬಳ್ಳಿ:

ಇಲ್ಲಿಯ ವೀರಾಪುರ ಓಣಿಯಲ್ಲಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಬರ್ಬರವಾಗಿ ಹತ್ಯೆಯಾದ ಅಂಜಲಿಯ ಹಂತಕನಿಗೆ ಗಲ್ಲು ಶಿಕ್ಷೆ ನೀಡಬೇಕು, ಇಲ್ಲವಾದಲ್ಲಿ ನಮಗೆ ಹಸ್ತಾಂತರಿಸಿ ನಾವೇ ಶಿಕ್ಷೆ ನೀಡುತ್ತೇವೆ ಎಂದು ಆಗ್ರಹಿಸಿ ಸಾರ್ವಜನಿಕರು ಇಲ್ಲಿಯ ಚೆನ್ನಮ್ಮ ವೃತ್ತ ಹಾಗೂ ವೀರಾಪುರ ಓಣಿಯಲ್ಲಿ ತೀವ್ರ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ ಕಿಮ್ಸ್‌ ಶವಾಗಾರದಿಂದ ಅಂಜಲಿ ಮೃತದೇಹವನ್ನು ಅವರ ಕುಟುಂಬದರಿಗೆ ಹಸ್ತಾಂತರಿಸುತ್ತಿದ್ದಂತೆ ಕೊಲೆ ಪ್ರಕರಣ ಖಂಡಿಸಿ ಇತ್ತ, ನಗರದ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಚೆನ್ನಮ್ಮ ಸರ್ಕಲ್‌ನಲ್ಲಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ಶವ ಹೊತ್ತ ಆ್ಯಂಬುಲೆನ್ಸ್‌ ಚೆನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿಯೇ ಶವ ಇಟ್ಟು ಅಂಜಲಿ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು. ಇಲ್ಲವೇ ತಮಗೆ ಹಸ್ತಾಂತರಿಸಿ ನಾವೇ ಶಿಕ್ಷೆ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಗೃಹ ಸಚಿವರು ಹಾಗೂ ಪೊಲೀಸ್‌ ಇಲಾಖೆಯ ವಿರುದ್ಧ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟು ಹಿಡಿದ ಕುಟುಂಬಸ್ಥರು:ವೀರಾಪುರ ಓಣಿಯ ನಿವಾಸಕ್ಕೆ ಅಂಜಲಿಯ ಮೃತದೇಹ ಕೊಂಡೊಯ್ದ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ, ತಮಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ ನಂತರವೇ ಅಂತ್ಯಕ್ರಿಯೆ ನಡೆಸುವುದಾಗಿ ಕೆಲ ಗಂಟೆಗಳ ಕಾಲ ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ಶಹರ ತಹಸೀಲ್ದಾರ್‌ ಕಲ್ಲಗೌಡ ಪಾಟೀಲ ಅಂಜಲಿ ಕುಟುಂಬದವರಿಗೆ ಎಷ್ಟೇ ಸಮಾಧಾನಪಡಿಸಿ ಮನವೊಲಿಸುವ ಪ್ರಯತ್ನ ಮಾಡಿದರೂ, ಅದು ಫಲಿಸಲಿಲ್ಲ. ಈ ವೇಳೆ ವೀರಾಪುರ ಓಣಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ಡಿಸಿಪಿಗಳಾದ ರಾಜೀವ್‌ ಎಂ. ಮತ್ತು ರವೀಶ್‌ ಸಿ.ಆರ್‌. ಸೇರಿದಂತೆ ಎಲ್ಲ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಮುಗಿಲು ಮುಟ್ಟಿದ ಆಕ್ರಂದನ:ಅಂಜಲಿಯ ಮೃತದೇಹವನ್ನು ಕಿಮ್ಸ್‌ನ ಶವಾಗಾರಕ್ಕೆ ತಂದಾಗ ಅವರು ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಮತ್ತು ಹಿತೈಷಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. ಅಂಜಲಿಯ ಕೊಲೆಯ ಸುದ್ದಿ ತಿಳಿದ ವೀರಾಪುರ ಓಣಿಯೇ ನಿವಾಸಿಗಳು ಅಕ್ಷರಶಃ ಮಮ್ಮಲ ಮರಗಿದರು. ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುತ್ತಿದ್ದಂತೆ ಅವರ ಅಜ್ಜಿ ಹಾಗೂ ಸಹೋದರಿಯರು ಸೇರಿದಂತೆ ಕುಟುಂಬಸ್ಥರು ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಕೊಲೆ ಬೆದರಿಕೆ ಹಾಕಿದ್ದ ಆರೋಪಿ?‘ಆರೋಪಿ ವಿಶ್ವನಾಥ ಅಲಿಯಾಸ್‌ ಗಿರೀಶ್‌ ಸಾವಂತ ಅಂಜಲಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಅಲ್ಲದೇ ತನ್ನ ಜತೆಗೆ ಮೈಸೂರಿಗೆ ಬರಲಿಲ್ಲವೆಂದರೆ ನೇಹಾ ಹಿರೇಮಠ ಮಾದರಿಯಲ್ಲೇ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದನು. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದಾಗ ಇವೆಲ್ಲ ಮೂಢನಂಬಿಕೆ ಎಂದು ಹೇಳಿ ನಮ್ಮನ್ನು ಸಾಗ ಹಾಕಿದ್ದರು. ಈಗ ಅಂಜಲಿಯ ಸಾವಾಗಿದೆ. ಇದಕ್ಕೆ ಯಾರು ಹೊಣೆ? ಆರೋಪಿಯನ್ನು ಕೂಡಲೇ ಎನ್‌ಕೌಂಟರ್‌ ಮಾಡಬೇಕು ಎಂದು ಮೃತ ಅಂಜಲಿ ಕುಟುಂಬಸ್ಥರು ಮಾಧ್ಯಮದ ಎದುರು ತಮ್ಮ ಅಳಲು ತೋಡಿಕೊಂಡರು.