ಅಂಜಲಿ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯ

| Published : May 17 2024, 12:34 AM IST

ಸಾರಾಂಶ

ಅಂಜಲಿ ಕೊಲೆ ಮಾಡಿರುವ ಅರೋಪಿಯನ್ನು ಬಂಧಿಸಿ ಕಠಿಣ ಶೀಕ್ಷೆ ನೀಡುವಂತೆ ಒತ್ತಾಯಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಎಸ್‌ಡಿಪಿಐ ಕಾರ್ಯಕರ್ತರ ಪ್ರತಿಭಟನೆ । ರಾಜ್ಯ ಸರ್ಕಾರ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಅಂಜಲಿ ಕೊಲೆ ಮಾಡಿರುವ ಅರೋಪಿಯನ್ನು ಬಂಧಿಸಿ ಕಠಿಣ ಶೀಕ್ಷೆ ನೀಡುವಂತೆ ಒತ್ತಾಯಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಹಸೀಲ್ದಾರಗೆ ಮನವಿ ಅರ್ಪಿಸಿದರು.

ರಾಜ್ಯದಲ್ಲಿ ನಿರಂತರವಾಗಿ ಪ್ರೇಮ ಪ್ರಕರಣದ ಕೊಲೆಗಳು ನಡೆಯುತ್ತಲೇ ಇವೆ. ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿಯನ್ನು ಗಿರೀಶ್ ಎನ್ನುವ ಯುವಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದನ್ನು ತೀವ್ರ ಖಂಡನೀಯ. ಕೊಲೆಗಾರನನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಯುವ ಸಮೂಹ ಪ್ರೀತಿ, ಪ್ರೇಮದ ಹೆಸರಿನಲ್ಲಿ ಹೀಗೆ ರಕ್ತ ಹರಿಸುತ್ತಿರುವುದು ಬಹಳ ನೋವಿನ ಸಂಗತಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಕೊಡಗಿನಲ್ಲಿ ಮೀನಾ ಎಂಬ 10ನೇ ತರಗತಿ ಮುಗಿಸಿದ್ದ ಬಾಲಕಿಯನ್ನು ಪ್ರಕಾಶ್ ಎಂಬ ಕ್ರೂರಿ ತಲೆ ಕತ್ತರಿಸಿ ಕೊಲೆ ಮಾಡಿದ್ದ. ಇಂತಹವು ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಅಂಜಲಿ ಕೊಲೆಗೂ ಮುನ್ನ ಆರೋಪಿ ಗಿರೀಶ್ ಆಕೆಗೆ ಜೀವ ಬೆದರಿಕೆ ಒಡ್ಡಿದ್ದರ ಬಗ್ಗೆ ಆಕೆಯ ಅಜ್ಜಿ ಹಾಗೂ ಅಕ್ಕ ಪೊಲೀಸರಲ್ಲಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಲೀಂ ಮನಿಯಾರ್, ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಜಿಲ್ಲಾ ಉಪಾಧ್ಯಕ್ಷ ಜಹಿರ್ ಅಬ್ಬಾಸ್, ಜಿಲ್ಲಾ ಕೋಶಾಧಿಕಾರಿ ಮಹಿಬೂಬ್ ರಜಾ, ಜಿಲ್ಲಾ ಮಾಧ್ಯಮ ಉಸ್ತುವಾರಿ ಭಾಷಾ ಸುಳೇಕಲ್, ಗಂಗಾವತಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಹಮ್ಮದ್ ಅಲಿ ಹಾಗೂ ಕಾರ್ಯದರ್ಶಿ ಎಂ.ಡಿ. ಅಜರುದ್ದೀನ್ ಸೇರಿದಂತೆ ಇತರರಿದ್ದರು.