ಅಂಜಲಿ ಕೊಲೆ ಪ್ರಕರಣ: ನಾಲ್ಕನೇ ದಿನವೂ ಮುಂದುವರಿದ ವಿಚಾರಣೆ

| Published : May 27 2024, 01:08 AM IST

ಅಂಜಲಿ ಕೊಲೆ ಪ್ರಕರಣ: ನಾಲ್ಕನೇ ದಿನವೂ ಮುಂದುವರಿದ ವಿಚಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಐಡಿ ತನಿಖೆ ವೇಳೆ ಪದೇ ಪದೇ ಆರೋಪಿ ತನ್ನ ಹೇಳಿಕೆ ಬದಲಿಸುತ್ತಿರುವ ಹಿನ್ನೆಲೆಯಲ್ಲಿ ಅವನ ಬಗ್ಗೆ ಸಿಐಡಿ ತಂಡ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಕುರಿತಂತೆ ಸಿಐಡಿ ತಂಡವು ಆರೋಪಿ ಗಿರೀಶ ಸಾವಂತ ವಿಚಾರಣೆಯನ್ನು ನಾಲ್ಕನೇ ದಿನವೂ ಮುಂದುವರಿಸಿದೆ. ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೂ ಆರೋಪಿಯ ಸುದೀರ್ಘ ವಿಚಾರಣೆಗೆ ಒಳಪಡಿಸಲಾಯಿತು.

ಸಿಐಡಿ ತನಿಖೆ ವೇಳೆ ಪದೇ ಪದೇ ಆರೋಪಿ ತನ್ನ ಹೇಳಿಕೆ ಬದಲಿಸುತ್ತಿರುವ ಹಿನ್ನೆಲೆಯಲ್ಲಿ ಅವನ ಬಗ್ಗೆ ಸಿಐಡಿ ತಂಡ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಯ ಸ್ನೇಹಿತರು, ಸಂಬಂಧಿಕರು ಹಾಗೂ ಪೋಷಕರನ್ನು ಕರೆಸಿ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಅಂಜಲಿ ಹತ್ಯೆ ಮಾಡಲು ಮೇ 15ರಂದು ಬೆಳಗ್ಗೆ ಆರೋಪಿ ಗಿರೀಶ ಹೊಸ ಬಸ್ ನಿಲ್ದಾಣದಿಂದ ವೀರಾಪುರ ಓಣಿಗೆ ಆಟೋದಲ್ಲಿ ಬಂದಿದ್ದನು. ಇದಕ್ಕೆ ಸಂಬಂಧಿಸಿದಂತೆ ಆರೋಪಿ ಬಂದಿದ್ದ ಲೋಹಿಯಾ ನಗರದ ಆಟೋ ಚಾಲಕನನ್ನು ಸ್ಥಳೀಯ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ಸಹ ನಡೆಸಿದ್ದರು. ಅಲ್ಲದೇ, ಆಟೋ ಚಾಲಕನ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಪೊಲೀಸರು, ಆರೋಪಿಯ ಜತೆಗಿನ ಸಂಬಂಧ ಮತ್ತು ಇಲ್ಲಿಗೆ ಏಕೆ ಕರೆತಂದು ಬಿಟ್ಟಿದ್ದ ಎಂಬುದರ ಕುರಿತು ಪೊಲೀಸರು ಕಲೆ ಹಾಕಿದ್ದರು. ಆದರೆ, ಆರೋಪಿಗೂ ಮತ್ತು ಈ ಕೊಲೆ ಪ್ರಕರಣಕ್ಕೂ ಆಟೋ ಚಾಲಕನ ಲಿಂಕ್ ಆಗದೇ ಇರುವ ಹಿನ್ನೆಲೆಯಲ್ಲಿ ಮುಂದಿನ ತನಿಖೆಗೆ ಸಹಕರಿಸುವಂತೆ ಮುಚ್ಚಳಿಕೆ ಸಹ ಬರೆದುಕೊಂಡು ಕಳುಹಿಸಿದ್ದರು. ಈ ಹಂತದಲ್ಲಿಯೂ ಸಿಐಡಿ ತಂಡ ವಿಚಾರಣೆ ನಡೆಸಲು ತಯಾರಿ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಂಜಲಿ ಹತ್ಯೆ ಆರೋಪಿ ಗಿರೀಶ ಸಾವಂತ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿ ₹8 ಸಾವಿರ ನಗದು ಹಾಗೂ ₹3.30 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿರುವ ಪ್ರಕರಣವೂ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಡಿಗೇರಿ ಠಾಣೆ ಪೊಲೀಸರು, ಶನಿವಾರ ದೂರುದಾರ ಮಹಿಳೆ ಹಾಗೂ ಚಿನ್ನಾಭರಣ ಕೊಡುವ ಸಂದರ್ಭದಲ್ಲಿದ್ದ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇದನ್ನು ಸಿಐಡಿ ತಂಡ ತಮ್ಮ ತನಿಖೆಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.