ಅಂಜಲಿ ಹತ್ಯೆ ಕೇಸ್‌ ಸಿಐಡಿಗೆ: ಪರಮೇಶ್ವರ

| Published : May 21 2024, 12:41 AM IST / Updated: May 21 2024, 02:27 PM IST

Dr G Parameshwara

ಸಾರಾಂಶ

ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಂಗಳವಾರ ಸಂಜೆಯೊಳಗೆ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.

 ಹುಬ್ಬಳ್ಳಿ :  ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಂಗಳವಾರ ಸಂಜೆಯೊಳಗೆ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಅಲ್ಲದೆ, ಯಾವುದೇ ಕಾರಣಕ್ಕೂ ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣಗಳನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಗರಕ್ಕೆ ಆಗಮಿಸಿದ್ದ ಸಚಿವರು, ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನೇಹಾ ಹಿರೇಮಠ ಕೇಸ್‌ನ್ನು ಸಿಐಡಿಗೆ ವಹಿಸಲಾಗಿದೆ. ಅದರ ತನಿಖೆ ಕೂಡ ನಡೆಯುತ್ತಿದೆ. ಅದರಂತೆ ಅಂಜಲಿ ಅಂಬಿಗೇರ ಕೇಸ್‌ನ್ನೂ ಸಿಐಡಿಗೆ ವಹಿಸಲಾಗುವುದು. ಈ ಎರಡೂ ಪ್ರಕರಣಗಳನ್ನು ಸಿಬಿಐಗೆ ವಹಿಸುವುದಿಲ್ಲ. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ. ಅವರೇ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆಳೆಯುತ್ತಾರೆ ಎಂದು ತಿಳಿಸಿದರು.

ಸ್ಥಳೀಯ ಪೊಲೀಸರು ಸಮರ್ಥರಿಲ್ಲವೇ ಎಂಬ ಪ್ರಶ್ನೆಗೆ, ಸ್ಥಳೀಯ ಪೊಲೀಸರು ಸಮರ್ಥರೇ ಇದ್ದಾರೆ. ಆದರೆ, ಕೆಲವೊಂದಿಷ್ಟು ಸೂಕ್ಷ್ಮ ಪ್ರಕರಣಗಳಲ್ಲಿ ಯಾವುದೇ ಇನ್‌ಫ್ಯುಲೆನ್ಸ್‌ ಆಗಬಾರದು ಎಂಬ ಕಾರಣಕ್ಕೆ ಸಿಐಡಿಗೆ ನೀಡಲಾಗುತ್ತಿದೆ ಅಷ್ಟೇ ಎಂದರು.

ಅಂಜಲಿ ಕೊಲೆ ಬೆದರಿಕೆ ಬಗ್ಗೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದು ಕಂಡು ಬಂದಿದೆ. ಈ ಕಾರಣಕ್ಕಾಗಿ ಅಲ್ಲಿನ ಸಿಬ್ಬಂದಿ, ಪಿಐ ಅವರನ್ನು ಅಮಾನತುಗೊಳಿಸಲಾಗಿದೆ. ಡಿಸಿಪಿ ಕೂಡ ಜವಾಬ್ದಾರಿಯಾದ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಇದೀಗ ತನಿಖೆ ನಡೆಯುತ್ತಿದೆ. ಮತ್ಯಾವ ಅಧಿಕಾರಿ ನಿರ್ಲಕ್ಷ್ಯ ಮಾಡಿದ್ದಾರೋ ಅವರ ಮೇಲೆಲ್ಲ ಕ್ರಮವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಜತೆ ಚರ್ಚಿಸಿ ಕ್ರಮ:

ಅಂಜಲಿ ಅಂಬಿಗೇರ ಅವಳದ್ದು ಕಡುಬಡತನದ ಕುಟುಂಬ. ಧನಸಹಾಯ ಮಾಡುವಂತೆ, ಸಹೋದರಿಯೊಬ್ಬಳ್ಳಿಗೆ ಸರ್ಕಾರಿ ನೌಕರಿ, ವಾಸಿಸಲು ಮನೆ ವ್ಯವಸ್ಥೆಯನ್ನು ಆ ಕುಟುಂಬ ಕೇಳಿಕೊಂಡಿದೆ. ಆದರೆ, ಸದ್ಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಪ್ರಕಟಣೆ ಮಾಡಲು ಬರುವುದಿಲ್ಲ. ಹೀಗಾಗಿ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಸಚಿವರು ತಿಳಿಸಿದರು.