ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಧ್ಯಯನ ಪ್ರವಾಸ ಕೈಗೊಂಡಿದ್ದ ಕಾಲೇಜು ವಿದ್ಯಾರ್ಥಿಗಳು ಪ್ರಯಾಣ ಬೆಳೆಸಿದ್ದ ಖಾಸಗಿ ಬಸ್‌ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 16ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಆರ್‌ಸಿಯು ಬಳಿಯ ಪೂನಾ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಶುಕ್ರವಾರ ಸಂಜೆ ನಡೆದಿದೆ.ಪುಣಾದಲ್ಲಿರುವ ಡಿ.ವೈ.ಪಾಟೀಲ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪುಣಾದಲ್ಲಿನ ಕಾಲೇಜಿನಿಂದ ಮೂರು ಖಾಸಗಿಗಳ ಮೂಲಕ ಅಧ್ಯಯನಕ್ಕಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರವಾಸ ಬೆಳೆಸಿದ್ದರು. ಕೃಷಿ ವಿಶ್ವ ವಿದ್ಯಾಲಯದಲ್ಲಿ ಮಾಹಿತಿ ಪಡೆದು, ಬಳಿಕ ಪುಣಾಗೆ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯ ಇರುವ ಭೂತರಾಮಣಹಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು, ಮತ್ತೆ ಪ್ರಯಾಣ ಬೆಳೆಸಿದ್ದರು. ಕಾಲೇಜು ವಿದ್ಯಾರ್ಥಿಗಳು ಪೂಣಾದ ಕಡೆಗೆ ಪ್ರಯಾಣ ಬೆಳೆಸಿದ್ದ 3 ಖಾಸಗಿ ಬಸ್‌ಗಳ ಪೈಕಿ ಎರಡು ಮುಂದೆ ಸಾಗಿದ್ದವು, ಕೇವಲ ವಿದ್ಯಾರ್ಥಿನಿಯರು ಇರುವ ಬಸ್ ಹಿಂದೆ ಇತ್ತು. ರಾಣಿ ಚನ್ನಮ್ಮ ವಿಶ್ವವಿದ್ಯಾಯಲಯ ಸಮೀಪದಲ್ಲಿ ರಸ್ತೆ ಕ್ರಾಸ್ ಮಾಡುವ ಸಮಯದಲ್ಲಿ ಎದುರಿನಿಂದ ಬಂದ ಟ್ಯಾಂಕರ್ ವಿದ್ಯಾರ್ಥಿನಿಯರು ಇರುವ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಿಟಕಿ ಬಳಿ ಇದ್ದ ಹಾಗೂ ಬಸ್ ಚಾಲಕ ದಿಢೀರ್ ಬ್ರೆಕ್ ಹಾಕಿದ್ದರಿಂದ ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕಾಕತಿ ಪೊಲೀಸ್ ಘಟನಾ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಆ್ಯಂಬುಲೆನ್ಸ್ ಹಾಗೂ ಪೊಲೀಸ್ ಜೀಪ ಮೂಲಕ ನಗರದಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದರಿಂದ ಪೊಲೀಸರು, ವೈದ್ಯರು ಹಾಗೂ ಸಹಪಾಠಿಗಳು ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.