ಜಿಲ್ಲೆಗೆ ಅಂಟಿದ ಕಳಂಕ ಅಳಿಸಿದ ಅಂಕಿತಾ ಕೊಣ್ಣೂರ: ಡಿಸಿ ಜಾನಕಿ

| Published : May 19 2024, 01:49 AM IST

ಸಾರಾಂಶ

ರಾಜ್ಯದಲ್ಲಿ ಬಾಗಲಕೋಟೆ ಬಾಲ್ಯವಿವಾಹ ಜಿಲ್ಲೆಯೆಂಬ ಕಳಂಕವನ್ನು ಅಂಕಿತಾ ಬಸಪ್ಪ ಕೊಣ್ಣೂರ ಅಳಿಸಿ ಹಾಕಿದ್ದಾರೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿ ಬಾಗಲಕೋಟೆ ಬಾಲ್ಯವಿವಾಹ ಜಿಲ್ಲೆಯೆಂಬ ಕಳಂಕವನ್ನು ಅಂಕಿತಾ ಬಸಪ್ಪ ಕೊಣ್ಣೂರ ಅಳಿಸಿ ಹಾಕಿದ್ದಾರೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಶನಿವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಕುಣ್ಣೂರು ಹಾಗೂ ಪಾಲಕರು ಮತ್ತು ಶಿಕ್ಷಕರಿಗೆ ಸತ್ಕರಿಸಿ ಮಾತನಾಡಿದ ಅವರು, ಜಿಲ್ಲೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಅದರಲ್ಲೂ ಎಸ್.ಎಸ್.ಎಲ್.ಸಿಯಲ್ಲಿ 27ನೇ ಸ್ಥಾನದಲ್ಲಿತ್ತು. ಈ ಬಾರಿ 13ನೇ ಸ್ಥಾನ ಪಡೆದು ಮೇಲೆ ಬಂದಿದೆ. ಇದರ ಜೊತೆಗೆ ಜಿಲ್ಲೆಯ ಅಂಕಿತಾ ಕೊಣ್ಣೂರು ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆಕೊಂಡಿರುವುದು ಜಿಲ್ಲೆಗೆ ಹೊಸ ದಿಕ್ಕು ತೋರಿಸಿದಂತಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ಹೆಣ್ಣು ಮಗುವಿನ ಪಾಲಕರು ತಮ್ಮ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಕನಿಷ್ಠ 18 ವರ್ಷ ಆಗುವವರೆಗಾದರೂ ಶಿಕ್ಷಣ ಕೊಡಿಸಬೇಕು. ಅಂಕಿತಾಳ ತಾಯಿ ಎಸ್.ಎಸ್.ಎಲ್.ಸಿಯಲ್ಲಿ ಶೇ.84ರಷ್ಟು ಅಂಕ ಗಳಿಸಿದ್ದರು. ಆದರೂ ಗೃಹಿಣಿಯಾಗಿದ್ದಾರೆ. ತಮ್ಮಲ್ಲಿರುವ ಶೈಕ್ಷಣಿಕ ಚಿಲುಮೆಯನ್ನು ಮಗಳ ಮೂಲಕ ಸಾಧಿಸಿ ತೋರಿಸಿದ್ದಾರೆ. ಇವರ ಈ ಸಾಧನೆ ಎಲ್ಲ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಅದರಲ್ಲೂ ಬಾಲ್ಯವಿವಾಹ ಮಾಡಲು ಮುಂದಾಗುತ್ತಿರುವ ಪಾಲಕರಿಗೆ ಅಂಕಿತಾಳ ಸಾಧನೆ ಮಾದರಿಯಾಗಿದೆ. ಈಗಾಗಲೇ ಬಾಲ್ಯವಿವಾಹಕ್ಕೊಳಗಾದ ಅನೇಕ ಹೆಣ್ಣು ಮಕ್ಕಳಲ್ಲೂ ಕೂಡ ಅಂಕಿತಾಳಂತಹ ಪ್ರತಿಭೆಗಳು ಇದ್ದಿರಬಹುದೇನೋ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಹಲವು ದಶಕಗಳ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಖಲೆ ನಿರ್ಮಿಸುತ್ತಿರುವ ಶಾಲೆಗಳು ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು ಕಂಡುಬರುತ್ತಿದ್ದವು. ಅದರಲ್ಲೂ ಮರಿಮಲ್ಲಪ್ಪ ಶಾಲೆ ಮುಂಚೂಣಿಯಲ್ಲಿರುತ್ತಿತ್ತು. ಈ ವರ್ಷ ಅಂಕಿತಾಳ ಸಾಧನೆಯಿಂದಾಗಿ ಜಿಲ್ಲೆ ಅಷ್ಟೇ ಅಲ್ಲ ಉತ್ತರ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದ್ದು, ಆ ದಿಶೆಯಲ್ಲಿ ಜಿಪಂ ಪ್ರತಿ ಗ್ರಾಮದಲ್ಲಿ ಗ್ರಾಪಂ ಮೇಲುಸ್ತುವಾರಿಯಲ್ಲಿ ಗ್ರಂಥಾಲಯ, ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದೆಂದು ತಿಳಿಸಿದರು.

ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬುದಕ್ಕೆ ಅಂಕಿತಾ ಸಾಕ್ಷಿಯಾಗಿದ್ದಾರೆ. ಪ್ರತಿಭೆ ತೋರಿಸಲು ಉತ್ತಮ ಶಾಲೆ ಮುಖ್ಯವಲ್ಲ, ಸಾಧನೆ ಮುಖ್ಯ ಎಂಬುದನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿ ತೋರಿಸಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೆಬ್ ಕಾಸ್ಟಿಂಗ್ ಮಾಡುವ ಮೂಲಕ ಗುಣಾತ್ಮಕ ಶಿಕ್ಷಣ ನೀಡುವಂತಹ ಜಿಲ್ಲೆಗಳನ್ನು ಗುರುತಿಸುವಂತಹ ಕಾರ್ಯವಾಗಿದೆ ಎಂದರು.

ಜಿಪಂ ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಜು ವಾರದ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ನನ್ನ ಶ್ರಮದ ಜೊತೆ ಕುಟುಂಬ, ಶಾಲಾ ಶಿಕ್ಷಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ತುಂಬಾ ಸಹಕಾರ ನೀಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಸಾಧಿಸುವ ಛಲವೊಂದಿದ್ದರೆ ಮಾತ್ರ ಸಾಲದು. ಅಲ್ಲಿಯ ವಾತಾವರಣ ಹಾಗೂ ಪ್ರೇರಣೆ ಇದ್ದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನನ್ನ ಕೆಲ ಮಿತ್ರರು ಪರೀಕ್ಷೆಯ ಭಯದಲ್ಲಿ ಅಂಕ ಪಡೆಯುವಲ್ಲಿ ವಿಫಲರಾಗಿರಬಹುದು. ಆದರೆ, ಅವರು ಕೂಡ ಬುದ್ಧಿವಂತರೇ, ಇಲ್ಲಿ ಅಂಕ ಮಹತ್ವವಾಗುವದಿಲ್ಲ.

-ಅಂಕಿತಾ ಕೊಣ್ಣೂರ, ರ್‍ಯಾಂಕ್ ವಿದ್ಯಾರ್ಥಿ