ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ಗ್ರೀನ್‌ಪೀಲ್ಡ್ ವಾಣಿಜ್ಯ ಬಂದರಿಗೆ ವಿರೋಧ ವ್ಯಕ್ತಪಡಿಸಿ ಅಂಕೋಲಾ ಉಳಿಸಿ ಸಮಿತಿಯಿಂದ ಕರೆ ನೀಡಿದ್ದ ಅಂಕೋಲಾ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ವಾಣಿಜ್ಯ ಬಂದರು ಯೋಜನೆಗೆ ವಿರೋಧ । ಪ್ರತಿಭಟನಾ ಮೆರವಣಿಗೆಯಲ್ಲಿ ಗಮನ ಸೆಳೆದ ಅಣಕು ಶವಯಾತ್ರೆ
ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ಅಂಕೋಲಾಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ಗ್ರೀನ್‌ಪೀಲ್ಡ್ ವಾಣಿಜ್ಯ ಬಂದರಿಗೆ ವಿರೋಧ ವ್ಯಕ್ತಪಡಿಸಿ ಅಂಕೋಲಾ ಉಳಿಸಿ ಸಮಿತಿಯಿಂದ ಕರೆ ನೀಡಿದ್ದ ಅಂಕೋಲಾ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಈ ಯೋಜನೆ ವಿರೋಧಿಸಿ ಕಳೆದ 13 ದಿನಗಳಿಂದ ಧರಣಿ, 1 ವರ್ಷದಿಂದ ವಿವಿಧ ರೀತಿಯ ಪ್ರತಿಭಟನೆ ಮತ್ತು ಹೋರಾಟ ನಡೆಸಿ ಗಮನ ಸೆಳೆಯಲಾಗಿತ್ತು. ಜೆಎಸ್‌ಡಬ್ಲ್ಯೂ ವಾಣಿಜ್ಯ ಬಂದರು ನಿರ್ಮಾಣದ ಕಾರ್ಯವನ್ನು ತಕ್ಷಣ ಕೈಬಿಟ್ಟು ಸಾರ್ವಜನಿಕರ ಹಿತ ಕಾಪಾಡುವ ಕಾರ್ಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಬೆಳಗ್ಗೆ 9 ಗಂಟೆಗೆ ಜೈಹಿಂದ್ ವೃತ್ತದ ಬಳಿ ಸಭೆ ಸೇರಿದ 5 ಸಾವಿರಕ್ಕಿಂತಲೂ ಹೆಚ್ಚಿನ ಪ್ರತಿಭಟನಾಕಾರರು ಜೈಹಿಂದ್ ವೃತ್ತದಿಂದ ದಿನಕರ ದೇಸಾಯಿ ಮಾರ್ಗವಾಗಿ, ಕಿತ್ತೂರು ಚೆನ್ನಮ್ಮ ಮಾರ್ಗದ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಯೋಜನೆಯ ಅಣಕು ಶವ ಹೊತ್ತು, ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ, ನಮ್ಮ ಪ್ರತಿಭಟನೆಯ ಸ್ಥಳಕ್ಕೆ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿ ಬಂದು ನಮ್ಮ ಸಮಸ್ಯೆ ಆಲಿಸಿ ಜೆಎಸ್‌ಡಬ್ಲ್ಯೂ ಕಂಪನಿ ನಿರ್ಮಾಣಕ್ಕೆ ಹೊರಟಿರುವ ವಾಣಿಜ್ಯ ಬಂದರನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು.
ನಮ್ಮ ಭೂಮಿ ನಮ್ಮ ಹಕ್ಕು, ನಮ್ಮ ಸಮುದ್ರ ನಮ್ಮ ಹಕ್ಕು. ಸ್ಥಳೀಯವಾಗಿ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ನಿಸರ್ಗವನ್ನು ಯಾವುದೇ ಕಾರಣಕ್ಕೂ ನಾವು ಯಾವುದೇ ಕಂಪನಿಗಳಿಗೆ ನೀಡುವುದಿಲ್ಲ ಎನ್ನುವ ಆಕ್ರೋಶದ ಮಾತುಗಳು ಪ್ರತಿಭಟನಾಕಾರಿಂದ ಹೊರಹೊಮ್ಮಿದವು.ಪ್ರಮುಖ ಸಂಜೀವ ಬಲೆಗಾರ ಮಾತನಾಡಿ, ಉಸ್ತುವಾರಿ ಸಚಿವರು 1 ವರ್ಷದಲ್ಲಿ ಒಮ್ಮೆಯೂ ನಮ್ಮತ್ತ ತಿರುಗಿ ನೋಡಿಲ್ಲ. ನಾವು ಕಳೆದ 1 ವರ್ಷದಿಂದ ಹೋರಾಟ ಹಮ್ಮಿಕೊಂಡು ಬಂದಿದ್ದೇವೆ. ಮುಖ್ಯಮಂತ್ರಿಗೆ ಮನವಿ ನೀಡಿದ್ದೇವೆ. ಈ ಬಂದರಿಗೆ ಅಂಕೋಲಾದಲ್ಲಿ ಶೇ. 99ರಷ್ಟು ವಿರೋಧ ವ್ಯಕ್ತವಾಗಿದೆ. ಇಂದು ಹೋರಾಟಕ್ಕೆ 1 ವರ್ಷ. ಧರಣಿ ಕುಳಿತು 14 ದಿನ ಅಂದರೆ. ನಮ್ಮನಾಳುವವರ ಶ್ರಾದ್ಧ (ವೈಕುಂಠ ಸಮಾರಾಧನೆ) ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಬಂದರು ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡಲ ವಿಜ್ಞಾನಿ ವಿ.ಎನ್. ನಾಯಕ ಮಾತನಾಡಿ, ಕರ್ನಾಟಕ ಸರ್ಕಾರದಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆ ಮಾರಾಟಕ್ಕಿದೆ. ಬೇಡವಾದ ಯೋಜನೆಗಳನ್ನು ಜಿಲ್ಲೆಗೆ ತಂದು ತುರುಕುತ್ತಾರೆ. ಬಂದರು ನಿರ್ಮಾಣದಿಂದ ಇಡೀ ಅಂಕೋಲಾ ತಾಲೂಕೆ ತೊಂದರೆಗೆ ಸಿಲುಕಲಿದೆ ಎಂದರು.ಮಾಜಿ ಸಚಿವ ಆನಂದ ಅಸ್ನೋಟಿಕರ್ ಮಾತನಾಡಿ, ಎಲ್ಲಿ ಜನವಸತಿ ಇಲ್ಲವೋ ಅಲ್ಲಿ ಈ ಬಂದರನ್ನು ನಿರ್ಮಾಣ ಮಾಡಲಿ. ಜನವಸತಿ ಇರುವ ಪ್ರದೇಶದಲ್ಲಿ ಬಂದರು ನಿರ್ಮಾಣ ಸರಿಯಾದ ಕ್ರಮವಲ್ಲ. ಈಗ ಪ್ರತಿಭಟನಾಕಾರರು ಅಣಕು ಶವಯಾತ್ರೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಂದರು ನಿರ್ಮಾಣವಾದಲ್ಲಿ ಸಜ್ಜನ್ ಜಿಂದಾಲ್ ಶವ ಯಾತ್ರೆ ನಡೆಯುವುದು ಖಚಿತ. ನಿಮ್ಮ ಜೊತೆ ನಾನಿದ್ದೇನೆ ಎಂದರು.
ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಪಪಂ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ, ಪ್ರಮುಖರಾದ ದಿನೇಶ ಶಿರವಾಡ, ಶಿವರಾಮ ಗಾಂವಕರ, ಮಹೇಶ ಹರಿಕಾಂತ ಕಾರವಾರ, ಭಾಸ್ಕರ ಪಟಗಾರ ಸೇರಿ ಇತರರು ಮಾತನಾಡಿದರು.ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ ನಾಯಕ, ಡಿವೈಎಸ್.ಪಿ ಗಿರೀಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.ಸಚಿವರಿಗೆ ಇಂಧನ ಖರ್ಚಿಗೆ ಹಣ ನೀಡಲು ತೀರ್ಮಾನ
ಅತಿದೊಡ್ಡ ಪ್ರತಿಭಟನೆಗೆ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿಗಳು ಬರಲು ವಿಳಂಬವಾದುದ್ದಕ್ಕಾಗಿ ಮಹಿಳೆಯರು ಹಣವನ್ನು ಭಿಕ್ಷೆ ಎತ್ತಿ ಅವರಿಗೆ ನೀಡಲು ತೀರ್ಮಾನಿಸಿದ್ದರು. ಆದರೆ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿರುವ ಹಿನ್ನೆಲೆ ಆ ಹಣವನ್ನು ಬಾರದೇ ಇರುವ ಉಸ್ತುವಾರಿ ಸಚಿವರಿಗೆ ಇಂಧನ ಖರ್ಚಿಗೆ ನೀಡುವುದೆಂದು ತೀರ್ಮಾನಿಸಲಾಯಿತು.