ಸಾರಾಂಶ
ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಿಸಲಿರುವ ಉದ್ದೇಶಿತ ವಾಣಿಜ್ಯ ಬಂದರು ಕಾಮಗಾರಿಗೆ ನಡೆಸುತ್ತಿರುವ ಸರ್ವೆ ಕಾರ್ಯವನ್ನು ಡಿ. 19ರೊಳಗೆ ಸ್ಥಗಿತಗೊಳಿಸದಿದ್ದರೆ ತಾಲೂಕಿನ ಎಲ್ಲ ಮೀನುಗಾರರು ಯಾಂತ್ರೀಕೃತ ಬೋಟುಗಳ ಮೂಲಕ ಮುತ್ತಿಗೆ ಹಾಕಿ ಸರ್ವೇ ಕಾರ್ಯವನ್ನು ನಿಲ್ಲಿಸಲಾಗುವುದು ಎಂದು ಮೀನುಗಾರರ ಮುಖಂಡ ಶ್ರೀಕಾಂತ ದುರ್ಗೇಕರ ತಿಳಿಸಿದರು.
ಗುರುವಾರ ಸಂಜೆ ಕೇಣಿ ದೇಶಿನಬಾಗದಲ್ಲಿ ವಿಶೇಷ ಸಭೆ ನಡೆಸಿ ಮಾತನಾಡಿ, ಕೇಣಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರಿಗೆ ಇಲ್ಲಿನ ಜನರ ತೀವ್ರ ವಿರೋಧವಿದೆ. ವಾರದ ಹಿಂದೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಮನವಿ ನೀಡಲಾಗಿದೆ. ಆದರೆ ಈ ವರೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎನ್ನುವುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದರು.ಒಂದು ಕಡೆ ಸಮುದ್ರದಲ್ಲಿ ಲಂಗರು ಹಾಕಿದ ಹಡಗು ಮತ್ತು ಟಗ್ ಮೂಲಕ ಸರ್ವೇ ಕಾರ್ಯ ಮುಂದುವರಿದಿದೆ. ವಾಣಿಜ್ಯ ಬಂದರು ಬೇಡ ಎನ್ನುವ ಮೀನುಗಾರರ ಮನವಿಗೆ ತಾಲೂಕಾಡಳಿತವಾಗಲಿ, ಜಿಲ್ಲಾಡಳಿತವಾಗಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತು ಡಿ. 19ರೊಳಗೆ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸದಿದ್ದರೆ ಬೃಹತ್ ಸಂಖ್ಯೆಯಲ್ಲಿ ಮೀನುಗಾರರು ಯಾಂತ್ರೀಕೃತ ಬೋಟಗಳ ಮೂಲಕ ಟಗ್ ಬಳಿ ತೆರಳಿ ಮುತ್ತಿಗೆ ಹಾಕುತ್ತೇವೆ ಎಂದರು.
ಮೀನುಗಾರರ ಮುಖಂಡ ಹುವಾ ಖಂಡೇಕರ ಮಾತನಾಡಿ, ಇಲ್ಲಿ ಬಂದರು ನಿರ್ಮಾಣಕ್ಕಾಗಿ ಬ್ರೇಕ್ ವಾಟರ್ ಮತ್ತು ಆಳ ಮಾಡುವ ಕಾರ್ಯದಿಂದ ಮುಂದೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ನೀರು ಉಪ್ಪು ನೀರಾಗಲಿದೆ. ಇದರಿಂದ ಜನರ ಜೀವನ ದುಸ್ತರವಾಗಲಿದೆ. ಇಲ್ಲಿನ ಜನರ ಕುಲಕಸುಬಾದ ಮೀನುಗಾರಿಕೆ ಸಂಪೂರ್ಣ ನಾಶವಾಗಲಿದೆ. ರಕ್ಷಣೆ ಮತ್ತು ಸುರಕ್ಷರತೆಯ ನೆಪದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿದರೆ ನಾವೆಲ್ಲ ಎಲ್ಲಿ ಹೋಗಬೇಕು. ಬೇಕಿದ್ದರೆ ಮೀನುಗಾರಿಕೆಯ ಬಂದರನ್ನೇ ಅಭಿವೃದ್ಧಿಪಡಿಸಲಿ, ವಾಣಿಜ್ಯ ಬಂದರು ಬೇಡವೇ ಬೇಡ ಎಂದರು.ಗ್ರಾಪಂ ಮಾಜಿ ಅಧ್ಯಕ್ಷೆ ಸರಿತಾ ಬಲೆಗಾರ್ ಮಾತನಾಡಿ, ವಾಣಿಜ್ಯ ಬಂದರಿಗಾಗಿ ಬಾಳೆಗುಳಿ ರಾಷ್ಟ್ರೀಯ ಹೆದ್ದಾರಿಯಿಂದ ಲಿಂಕ್ ರಸ್ತೆ ನಿರ್ಮಾಣವಾಗಲಿದೆ. ಇದರಿಂದ ಮುಂದೆ ಮ್ಯಾಂಗನೀಸ್ ಧೂಳಿನಿಂದ ಇಡೀ ಪ್ರದೇಶ ಮಾಲಿನ್ಯದಿಂದ ಕಲುಷಿತವಾಗಲಿದೆ. ಹೀಗಾಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಚಂದ್ರಕಾಂತ ಹರಿಕಂತ್ರ ಮಾತನಾಡಿ, ವಾಣಿಜ್ಯ ಬಂದರು ನಿರ್ಮಾಣದಿಂದ ಇಲ್ಲಿನ ಮೀನುಗಾರರು ಅತಂತ್ರರಾಗಲಿದ್ದಾರೆ. ಸರ್ಕಾರ ಮತ್ತು ಕಂಪನಿಗಳು ಸೇರಿ ಮೀನುಗಾರರು ತಾವಾಗಿಯೇ ಒಕ್ಕಲೆಬ್ಬುವ ವಾತಾವರಣ ಸೃಷ್ಟಿ ಮಾಡುತ್ತಾರೆ. ಸೀಬರ್ಡ್ ಯೋಜನಾ ಪ್ರದೇಶದಲ್ಲಿ ಈಗಾಗಲೇ ಮೀನುಗಾರಿಕೆ ನಿಷೇಧವಿದೆ. ಇಲ್ಲಿಯೂ ಅದೇ ಆಗುವುದು. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು. ಬೆಳಂಬಾರದ ಸುಂದರ ಖಾರ್ವಿ ಮಾತನಾಡಿ, ಕೇಣಿ ಮೀನುಗಾರರ ಬೆಂಬಲಕ್ಕೆ ತಾಲೂಕಿನ ಎಲ್ಲ ಮೀನುಗಾರರು ಇದ್ದೇವೆ. ಕೇಣಿ ವಾಣಿಜ್ಯ ಬಂದರು ವಿರುದ್ಧ ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದರು. ಸಂಜೀವ ಬಲೇಗಾರ ಮಾತನಾಡಿ, ಇಲ್ಲಿನ ಸ್ಥಳೀಯರಿಂದ, ಸ್ಥಳೀಯ ಆಡಳಿತದಿಂದ ಅಭಿಪ್ರಾಯ ಸಂಗ್ರಹಿಸದೆ, ಸ್ಥಳೀಯರಿಗೆ ಯಾವುದೇ ಮಾಹಿತಿಯನ್ನೂ ನೀಡದೆ ಬಂದರು ನಿರ್ಮಾಣಕ್ಕೆ ಮುಂದಾಗಿರುವುದು. ಬಡ ಮೀನುಗಾರರಿಗೆ ಮಾಡಿದ ದ್ರೋಹವಾಗಿದೆ. ಒಂದು ವೇಳೆ ಬಲಾತ್ಕಾರದಿಂದ ಬಂದರು ನಿರ್ಮಾಣಕ್ಕೆ ಮುಂದಾದರೆ ಇಲ್ಲಿಯ ಮೀನುಗಾರರಿಗೆ ರಾಷ್ಟ್ರಪತಿಗಳು ಮತ್ತು ಸುಪ್ರೀಂಕೋರ್ಟ್ ದಯಾಮರಣ ನೀಡಿ ನಮ್ಮ ಸಮಾಧಿಯ ಮೇಲೆ ವಾಣಿಜ್ಯ ಬಂದರು ಎಂಬ ಸೌಧ ಕಟ್ಟಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಸೂರಜ ಹರಿಕಂತ್ರ, ಶಂಕರ ಎಸ್. ಬಲೆಗಾರ, ಪ್ರಮೋದ ಬಾನಾವಳಿಕರ, ಸೂರ್ಯಕಾಂತ ಭೂತೆ, ಜ್ಞಾನೇಶ್ವರ ವಿ. ಹರಿಕಂತ್ರ, ಮಹೇಶ ವೈ. ದುರ್ಗೇಕರ, ಅನೀಲ ತಾಂಡೇಲ, ಹಾಲಪ್ಪ ಜಿ. ಹರಿಕಂತ್ರ, ವೆಂಕಟೇಶ ಕೆ. ದುರ್ಗೇಕರ, ಪ್ರಭಾಕರ ಖಾರ್ವಿ ಸೇರಿದಂತೆ ನೂರಾರು ಮೀನುಗಾರರು ಇದ್ದರು.