ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿಯೊಬ್ಬ ವ್ಯಕ್ತಿಗೆ ನೈಸರ್ಗಿಕವಾಗಿ ಬಂದಂತಹ ಹಕ್ಕುಗಳನ್ನು ಚಲಾಯಿಸುವುದರ ಜೊತೆಗೆ ಅವುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೇಲ್ಲರದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹೇಳಿದರು.ಜಿಪಂ ನೂತನ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಜಿ.ಎ.ಮೂಲಿಮನಿ ಮಾತನಾಡಿ, ಮೂಲಭೂತ ಹಕ್ಕುಗಳು ಜನತೆಗೆ ಮಾರಕವಾದರೆ ಹಕ್ಕುಗಳಿಗೆ ವಂಚನೆಯಾದರೆ ಪ್ರತಿಪಾದಿಸುವ ಕೆಲಸವಾಗಬೇಕು. ಕಾನೂನಿನಲ್ಲಿ ಸಾರ್ವಜನಿಕರಿಗೆ ಮಾನವ ಹಕ್ಕುಳಿಗೆ ಉಲ್ಲಂಘನೆಯಾದಂತ ಸಂದರ್ಭದಲ್ಲಿ ವಿಶಿಷ್ಟವಾದ ಅಧಿಕಾರ ನೀಡಿದ್ದಾರೆ ಎಂದರೆ ರಾತ್ರಿ 12 ಗಂಟೆಯಾದರೂ ಸುಪ್ರೀಂ ಕೋರ್ಟ್‌ನಲ್ಲಿ ಕೇಳಲು ಕಾನೂನಿಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಒಂದು ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದರೆ, ಪ್ರತಿಯೊಬ್ಬ ನಾಗರಿಕನೂ ತಮ್ಮ ಹಕ್ಕು ಪಡೆಯಬೇಕು. ಆದರೆ ಹಕ್ಕು ಪಡೆಯಬೇಕಾದರೆ ತಾವುಗಳು ಆ ಹಕ್ಕುಗಳ ಅಡಿಯಲ್ಲಿನ ಕರ್ತವ್ಯ ಮಾಡಬೇಕು. ಯಾವ ವ್ಯಕ್ತಿ ಕರ್ತವ್ಯ ಪಾಲಿಸದೇ ಕೇವಲ ಹಕ್ಕನ್ನು ಪಡೆಯಲಿಕ್ಕೆ ಹೋದವರು ಅಂತಹವರಿಗೆ ಹಕ್ಕುಗಳು ಅಸಿಂದುವಾಗಿರುತ್ತದೆ. ಇಂತಹ ಶ್ರೇಷ್ಠವಾದ ಹಕ್ಕು ಯಾರಿಂದಲೂ ಮೊಟಕುಗೊಳಿಸಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಮಾತ್ರ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಮಾತ್ರ ಇಂತಹ ಹಕ್ಕು ಹಿಂಪಡೆಯಬಹುದು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ 95 ಸಾವಿರ ಪ್ರಕರಣಗಳು ದಾಖಲಾಗಿವೆ. ಇವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನಂಪ್ರತಿ ದೂರುಗಳ ಸಂಖ್ಯೆ ಕಡಿಮೆಯಾಗಿ ಕಷ್ಟದಲ್ಲಿರುವ ವ್ಯಕ್ತಿಗೆ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಹಾಯ ಮಾಡಿದಾಗ ಮಾನವ ಹಕ್ಕು ರಕ್ಷಿಸಲು ಸಹಕಾರಿಯಾಗುತ್ತದೆ. ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ಜಿದ್ದಿ ಮಾನವ ಹಕ್ಕುಗಳ ಮಹತ್ವದ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾನವ ಹಕ್ಕುಗಳ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಪುನಿತ್ ಸೇರಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.