ಎಪತ್ತೈದು ವರ್ಷ ಮೇಲ್ಪಟ್ಟವರು ಮಾತ್ರ ಇರುವ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ದಾರರ ಕುಟುಂಬಗಳಿಗೆ ಮನೆಬಾಗಿಲಿಗೆ ಪಡಿತರ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಸುವಿಧಾ ಯೋಜನೆ ತಾಲೂಕಿನಲ್ಲಿ ಉತ್ತಮ ಸ್ಪಂದನೆ ಪಡೆದುಕೊಂಡಿದೆ.
ವಯಸ್ಸಿನ ಭಾರ ತಗ್ಗಿಸಿದ ಮನೆಬಾಗಿಲಿಗೆ ರೇಷನ್ ಸೇವೆ
ರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾ
ಎಪತ್ತೈದು ವರ್ಷ ಮೇಲ್ಪಟ್ಟವರು ಮಾತ್ರ ಇರುವ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ದಾರರ ಕುಟುಂಬಗಳಿಗೆ ಮನೆಬಾಗಿಲಿಗೆ ಪಡಿತರ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಸುವಿಧಾ ಯೋಜನೆ ತಾಲೂಕಿನಲ್ಲಿ ಉತ್ತಮ ಸ್ಪಂದನೆ ಪಡೆದುಕೊಂಡಿದೆ.ತಾಲೂಕಿನಲ್ಲಿ ಈಗಾಗಲೇ 110ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಪಡಿತರ ಅಂಗಡಿಕಾರರು ನೇರವಾಗಿ ಅವರ ಮನೆಗಳಿಗೆ ತೆರಳಿ ರೇಷನ್ ವಿತರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಯೋಜನೆಯಿಂದ ವಯೋವೃದ್ಧರಿಗೆ ಬಹು ದೊಡ್ಡ ನಿರಾಳತೆ ದೊರಕಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಯಸ್ಸಿನ ಕಾರಣದಿಂದ ರೇಷನ್ ಅಂಗಡಿಗೆ ತೆರಳಿ ಸರದಿ ನಿಲ್ಲುವುದು, ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದ ದಿನವಿಡೀ ಕಾಯುವುದು, ದೂರದ ಅಂಗಡಿಗಳಿಗೆ ಕಿಲೋಮೀಟರ್‌ಗಟ್ಟಲೆ ನಡೆಯುವುದು ವಯೋವೃದ್ಧರಿಗೆ ಕಠಿಣ ಸವಾಲಾಗಿತ್ತು. ಈ ಎಲ್ಲ ಅಸೌಕರ್ಯಗಳಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಅನ್ನ ಸುವಿಧಾ ಯೋಜನೆಯನ್ನು ಘೋಷಿಸಿತ್ತು.ಯೋಜನೆಯಡಿ ಪಡಿತರ ಅಂಗಡಿಕಾರರಿಗೆ ಸಾಮಾನ್ಯ ಕಮಿಷನ್ ಜತೆಗೆ ಪ್ರತಿ ಮನೆ ವಿತರಣೆಗೆ ಹೆಚ್ಚುವರಿಯಾಗಿ ₹50 ನೀಡಲಾಗುತ್ತಿದೆ. ಕಳೆದ ಅಕ್ಟೋಬರ್‌ನಿಂದ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಪ್ರತೀ ತಿಂಗಳು 5ರಿಂದ 10ನೇ ತಾರೀಖಿನೊಳಗೆ ಪಡಿತರ ವಿತರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯಾದ್ಯಂತ ಅನ್ನ ಸುವಿಧಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಅರ್ಹ ಪಡಿತರ ಕಾರ್ಡ್‌ದಾರರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಆಹಾರ ನಿರೀಕ್ಷಕ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.ವಯಸ್ಸಾಗಿದ್ದರಿಂದ ರೇಷನ್ ತೆಗೆದುಕೊಳ್ಳಲು ಹೋಗುವುದು ತುಂಬಾ ಕಷ್ಟವಾಗುತ್ತಿತ್ತು. ಈಗ ಮನೆ ಬಾಗಿಲಿಗೆ ರೇಷನ್ ಸಿಗುತ್ತಿರುವುದು ದೊಡ್ಡ ಅನುಕೂಲವಾಗಿದೆ. ಸರ್ಕಾರ ಇಂತಹ ಯೋಜನೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಫಲಾನುಭವಿ ಸುಶೀಲಾ ಶಿವಾ ಕಟಗಿ ಹೇಳಿದ್ದಾರೆ.