ಸಿದ್ದರಾಮಯ್ಯ ನಂತರ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆದಾಗ 5 ಕೆಜಿ ಅಕ್ಕಿಯನ್ನು 3ಕೆಜಿಗೆ ಇಳಿಸಿದರು.

ಕುಕನೂರು: ಮನುಷ್ಯ ಅನ್ನಕ್ಕಾಗಿ ಮನೆ ಮನೆಗೆ ಅಲೆದಾಡುತ್ತಿದ್ದ. ಭಿಕ್ಷಕರು ಹಳಸಿದ ಅನ್ನ ನೀಡಿಸಿಕೊಂಡು ಅದನ್ನೆ ಸೇವನೆ ಮಾಡುವ ಕಾಲ ಇತ್ತು. ಇಂತಹ ಮನಕಲುಕುವ ಭಿಕ್ಷಾಟನೆ ಕಾರ್ಯ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿದ್ದರಿಂದ ನಿರ್ಮೂಲನೆ ಆಯಿತು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ವೀರಾಪೂರ, ಭಾನಾಪೂರ, ಲಕಮಾಪೂರ ಹಾಗೂ ನಾನಾ ಗ್ರಾಮದಲ್ಲಿ ಶುಕ್ರವಾರ ಜರುಗಿದ ಜನಸಂಪರ್ಕ ಸಭೆ ಹಾಗೂ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 2013ರಲ್ಲಿ ಸಿದ್ದರಾಮಯಯ್ಯ ಸಿಎಂ ಆದ ತಕ್ಷಣ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಉಚಿತ ಮಾಡಿದರು.ಇದೇ ವೇಳೆಗೆ ಓಡಿಸ್ಸಾದ ಕಾಳಿಂಗ ಜಿಲ್ಲೆಯಲ್ಲಿ ಹಸಿವಿನಿಂದ ಜನರ ಸತ್ತರು. ಈ ವೇಳೆ ರಾಜ್ಯದಲ್ಲಿ 5ಕೆಜಿ ಆಹಾರ ಧಾನ್ಯ ನೀಡುವ ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರ ಮನಗಂಡು ಆಗಿನ ಪ್ರಧಾನಿ ಮನಮೋಹನಸಿಂಗ್ ಅವರು ಸಿಎಂ ಸಿದ್ದರಾಮಯ್ಯ ಮಾದರಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ರಾಷ್ಟ್ರದಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂದು ಕಾಯ್ದೆ ತಂದರು. ಅಂದಿನಿಂದ ಆಹಾರ ಧಾನ್ಯ ನೀಡುವ ಯೋಜನೆ ರಾಷ್ಟ್ರದಲ್ಲಿ ಜಾರಿಗೆ ಬಂದಿತು. ಸಿದ್ದರಾಮಯ್ಯ ನಂತರ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆದಾಗ 5 ಕೆಜಿ ಅಕ್ಕಿಯನ್ನು 3ಕೆಜಿಗೆ ಇಳಿಸಿದರು. ನಂತರ ಬಸವರಾಜ ಬೊಮ್ಮಾಯಿ ಅದನ್ನು 4 ಕೆಜಿ ಮಾಡಿದರು. ಮರಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯ ಉಚಿತವಾಗಿ ನೀಡುತ್ತಿದ್ದೇವೆ. 4.48 ಕೋಟಿ ಜನರಿಗೆ 10 ಕೆಜಿ ಆಹಾರ ಧಾನ್ಯ ಉಚಿತವಾಗಿ ರಾಜ್ಯದ ಜನತೆಗೆ ಸಿಗುತ್ತಿದೆ. ಸದ್ಯ ಇನ್ನೂ ಜನರು ಆಹಾರ ಹಾಗೂ ಹಸಿವಿನ ನೋವು ಅನುಭವಿಸಬಾರದು ಎಂದು 10 ಕೆಜಿಯಲ್ಲಿ ಐದು ಕೆಜಿ ಆಹಾರ ಧಾನ್ಯ ನೀಡಿ 1 ಕೆಜಿ ತೊಗರಿ ಬೇಳೆ, 1 ಕೆಜಿ ಹೆಸರು ಕಾಳು,1 ಕೆಜಿ ಒಳ್ಳೆಣ್ಣೆ, 1 ಕೆಜಿ ಉಪ್ಪು, 1ಕೆಜಿ ಸಕ್ಕರೆಯನ್ನು ಮುಂದಿನ ತಿಂಗಳಿನಿಂದ ನೀಡುತ್ತಿದ್ದೇವೆ ಎಂದರು.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ: ರೈತ ವರ್ಗದವರಿಗೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲವನ್ನು ರಾಜ್ಯ ಸರ್ಕಾರ ನೀಡುತ್ತದೆ.ಈ ಹಣವನ್ನು ನಬಾರ್ಡ ಬ್ಯಾಂಕಿನಿಂದ ಸಾಲ ಪಡೆದು ಅದಕ್ಕೆ ರಾಜ್ಯ ಸರ್ಕಾರ 6.5% ಪ್ರತಿಶತ ಬಡ್ಡಿ ಕಟ್ಟಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತದೆ ಎಂದರು.

ಮತ್ತೊಂದು ಕೌಶಲ್ಯ ಕೇಂದ್ರ ಮಂಜೂರು: ತಳಕಲ್ಲ ಗ್ರಾಮದಲ್ಲಿ ಈಗಾಗಲೇ ಒಂದು ಕೌಶಲ್ಯ ಕೇಂದ್ರ ಇದ್ದು, ಭಾನಾಪೂರದ ಗೊಂಬೆ ಫ್ಯಾಕ್ಟರಿ ಬಳಿ ಇನ್ನೊಂದು ಕೌಶಲ್ಯ ಕೇಂದ್ರ ಮಂಜೂರಾಗಿದೆ. ಅದಕ್ಕೆ ಕ್ಯಾಬಿನೆಟ್ ಅಪ್ರೋವಲ್ ಸಹ ಸಿಕ್ಕಿದ ಎಂದರು.

2000 ಮಕ್ಕಳಿಗೆ ವಸತಿ ನಿಲಯ ಮಂಜೂರು: ತಳಕಲ್ಲಿನ ಇಂಜಿನಿಯರ್‌ ಕಾಲೇಜಿನಲ್ಲಿ 800 ವಿದ್ಯಾರ್ಥಿ, ತಳಬಾಳಿನ ಡಿಗ್ರಿ ಕಾಲೇಜಿಗೆ 450 ವಿದ್ಯಾರ್ಥಿ, ಯಲಬುರ್ಗಾದ ಪಿಜಿ ಸೆಂಟರಿಗೆ 450 ವಿದ್ಯಾರ್ಥಿಗಳ ಹಾಗೂ ಗುನ್ನಾಳ ಪಾಲಿಟೆಕ್ನಿಕ್ ಕಾಲೇಜಿಗೆ 200 ವಿದ್ಯಾರ್ಥಿಗಳ ಒಟ್ಟು ಎರಡು ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಮಂಜೂರು ಮಾಡಿಸಿದ್ದೇನೆ ಎಂದರು.

ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಪಿಡಬ್ಲೂಡಿ ಎಇಇ ಮಲ್ಲಿಕಾರ್ಜುನ, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ರಾಜಶೇಖರ ಮಳಿಮಠ, ಬಿಇಒ ಅಶೋಕಗೌಡ, ಆಹಾರ ಇಲಾಖೆ ತಾಲೂಕಾಧಿಕಾರಿ ಮಂಜುನಾಥ ಮ್ಯಾಗಳಮಠ, ಇಂಜಿನಿಯರ್‌ ರಾಘವೇಂದ್ರ ಜೋಷಿ, ಯಲಬುರ್ಗಾ ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಕೆಎಂಎಫ್ ನಿರ್ದೇಶಕ ಹಂಪಯ್ಯಸ್ವಾಮಿ, ಕಂದಾಯ ನಿರೀಕ್ಷಕ ರಂಗನಾಥ, ಅಶೋಕ ತೋಟದ, ಹನುಮಂತಗೌಡ ಚಂಡೂರು, ಶಿವನಗೌಡ ದಾನರಡ್ಡಿ, ಗವಿಸಿದ್ದಪ್ಪ ಜಂತ್ಲಿ, ಸಂಗಮೇಶ ಗುತ್ತಿ, ಸಂತೋಷ ಬೆಣಕಲ್ಲ, ಮಲ್ಲು ಜಕ್ಕಲಿ, ವೀರನಗೌಡ ಡಂಬಳ, ತಿಮ್ಮಣ್ಣ ಚೌಡಿ ಇತರರಿದ್ದರು.