ಮುಂಡರಗಿ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಕೇವಲ ಶ್ರೀಗಳಿಗೆ ಮಾತ್ರವಲ್ಲದೆ, ಇಡೀ ನಾಡಿನ ಜನತೆ ಹಾಗೂ ಸರ್ಕಾರಕ್ಕೆ ಸಂದ ಗೌರವವಾಗಿದೆ.

ಮುಂಡರಗಿ ಅನ್ನದಾನೀಶ್ವರ ಶ್ರೀಗಳಿಗೆ ರಾಜ್ಯೊತ್ಸವ ಪ್ರಶಸ್ತಿ ಸಂದಿರುವುದು ಇಡೀ ನಾಡಿಗೆ ಸಂದ ಗೌರವ: ಉನ್ನತ ಶಿಕ್ಷಣ ಸಚಿವ

ಕನ್ನಡಪ್ರಭ ವಾರ್ತೆ ಮುಂಡರಗಿಮುಂಡರಗಿ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಕೇವಲ ಶ್ರೀಗಳಿಗೆ ಮಾತ್ರವಲ್ಲದೆ, ಇಡೀ ನಾಡಿನ ಜನತೆ ಹಾಗೂ ಸರ್ಕಾರಕ್ಕೆ ಸಂದ ಗೌರವವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಸಂಜೆ ಮುಂಡರಗಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಸರ್ಕಾರದ ಪರವಾಗಿ ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಅನ್ನದಾನೀಶ್ವರ ಮಹಾಸ್ವಾಮೀಜಿಯವರು ತಮ್ಮ ತ್ಯಾಗಮಯಿ ಜೀವನದ ಜೊತೆಗೆ ಶರಣ ತತ್ವ, ದಾಸೋಹ ಮತ್ತು ಕಾಯಕ ತತ್ವಗಳನ್ನು ಅಳವಡಿಸಿಕೊಂಡು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದ್ದಾರೆ. ಬರಪೀಡಿತ ಮತ್ತು ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಅನ್ನದಾನ ಮತ್ತು ಜ್ಞಾನದಾನದ ಮೂಲಕ ಮಹಾಮಾನವೀಯತೆಯ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಮಠದ ನೂರಾರು ಎಕರೆ ಆಸ್ತಿಗಳನ್ನು ಸಾರ್ವಜನಿಕವಾಗಿ ಹಾಗೂ ಕುಕನೂರಿನ ಎಪಿಎಂಸಿಗಾಗಿ ಸುಮಾರು 19 ಎಕರೆಗೂ ಅಧಿಕ ಜಮೀನನ್ನು ರೈತರ ಸಲುವಾಗಿ ದಾನ ನೀಡಿರುವುದು ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಕ್ಕೆ ಪರ್ಯಾಯವಾಗಿ ಮಠಮಾನ್ಯಗಳು ಮತ್ತು ಖಾಸಗಿ ಸಂಸ್ಥೆಗಳು ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ. ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷ ಎಂಜಿನಿಯರ್‌ಗಳು ಹೊರಬರುತ್ತಿದ್ದು, ಬೆಂಗಳೂರಿನಲ್ಲಿ 27 ಲಕ್ಷಕ್ಕೂ ಹೆಚ್ಚು ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಸಾಕ್ಷರತೆ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಲು ಮಠಗಳ ಶೈಕ್ಷಣಿಕ ಸೇವೆಯೂ ಪ್ರಮುಖ ಕಾರಣವಾಗಿದೆ ಎಂದರು.ಕ.ರಾ.ಬೆಲ್ಲದ ಕಾಲೇಜು ಕಟ್ಟಡಕ್ಕೆ ₹2 ಕೋಟಿ ಅನುದಾನ ನೀಡುವ ಕುರಿತು ನಿಯಮಾವಳಿಗಳನ್ನು ಪರಿಶೀಲಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಅಲ್ಲದೆ, ವಿಧಾನ ಪರಿಷತ್ ಸದಸ್ಯ ಸಂಕನೂರ ಅವರ ಸಲಹೆಯಂತೆ ಸ್ಥಳೀಯ ಪ್ರಾಥಮಿಕ ಶಾಲೆ ಮತ್ತು ಆಸ್ಪತ್ರೆಗೆ ಪೂಜ್ಯರ ಹೆಸರಿಡುವ ಕುರಿತು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ ಸಚಿವರು, ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಇದ್ದ 440 ಪ್ರಾಂಶುಪಾಲರ ಹುದ್ದೆಗಳ ಪೈಕಿ ಈಗಾಗಲೇ 310 ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಮುಂದಿನ ತಿಂಗಳಿನಿಂದ 2,000 ಸಹಾಯಕ ಪ್ರಾಧ್ಯಾಪಕರು ಹಾಗೂ ವಿಶ್ವವಿದ್ಯಾಲಯಗಳಿಗೆ 1,000 ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮಂಜುಶ್ರೀ ಎನ್. ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಕೇವಲ ಒಂದು ಪ್ರಶಸ್ತಿಯಲ್ಲ, ಬದಲಾಗಿ ನಾಡು ತನ್ನ ಸಾಧಕರಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ. ತಮ್ಮ ಬದುಕು, ಚಿಂತನೆ ಮತ್ತು ಕಾರ್ಯಗಳ ಮೂಲಕ ಸಮಾಜಕ್ಕೆ ದಿಕ್ಕು ತೋರುವ ಮಹನೀಯರ ಸೇವೆಯನ್ನು ಗುರುತಿಸಿ, ಅವರ ಸಾಧನೆಯನ್ನು ನಾಡಿನ ಸ್ಮೃತಿಯಲ್ಲಿ ಶಾಶ್ವತವಾಗಿ ದಾಖಲಿಸುವ ಮಹತ್ವದ ಪರಂಪರೆಯೇ ಈ ಪ್ರಶಸ್ತಿ. ಅಂತಹ ಪ್ರಶಸ್ತಿ ಅನ್ನದಾನೀಶ್ವರ ಸ್ವಾಮಿಜಿಯವರಿಗೆ ದೊರೆತಿರುವುದು ಹೆಮ್ಮೆ ತಂದಿದೆ ಎಂದು ಬಣ್ಣಿಸಿದರು.ಪ್ರಶಸ್ತಿ ಸ್ವೀಕರಿಸಿದ ಜ.ನಾಡೊಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು ಮಾತನಾಡಿ, ಬರಗಾಲದ ನಾಡಿನಲ್ಲಿ ಅಕ್ಷರ ಕ್ರಾಂತಿ ನಡೆಸಿ, ಬಡತನದ ಬೇಗೆಯಲ್ಲಿದ್ದ ಹಳ್ಳಿಗಳ ಮಕ್ಕಳಿಗೆ ಶಿಕ್ಷಣ ನೀಡಿದ ತೃಪ್ತಿ ಶ್ರೀಮಠಕ್ಕಿದೆ. ಸರ್ಕಾರದ ಅನುದಾನವಿಲ್ಲದೆಯೇ ಸುಮಾರು ₹6 ಕೋಟಿ ವೆಚ್ಚದಲ್ಲಿ ಪದವಿಪೂರ್ವ ಕಾಲೇಜು ಕಟ್ಟಲಾಗಿದೆ. ಮುಂಡರಗಿ ಭಾಗದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜು ಆಗಬೇಕು ಹಾಗೂ 50ನೇ ವರ್ಷದ ಹೊಸ್ತಿಲಲ್ಲಿರುವ ಪದವಿ ಕಾಲೇಜಿಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದ ಶ್ರೀಗಳು, ಸಚಿವ ರಾಯರಡ್ಡಿ ಇದಕ್ಕೆ ಸಹಕಾರ ನೀಡುವ ಭರವಸೆ ಇದೆ ಎಂದರು.

ವಿಧಾನಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ, ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಿ.ಡಿ. ಮೋರನಾಳ, ರುದ್ರಗೌಡ ಪಾಟೀಲ, ಡಾ. ದುರಗೇಶ ಕೆ.ಆರ್., ಕೆ.ಎಚ್. ಚೆನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಗಂಗಪ್ಪ, ಸಿ.ಆರ್. ಮುಂಡರಗಿ, ವಿಜಯಕುಮಾರ ಬೆಣ್ಣಿ, ಕೆ.ರಾಧಾ, ಬಸವರಾಜ ಕಟ್ಟೀಮನಿ ಸೇರಿದಂತೆ ಅನೇಕರಿದ್ದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ವಾಗತಿಸಿ, ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಹುಬಲಿ ಜೈನ್ ನಿರೂಪಿಸಿದರು.