ಇಡೀ ಕರ್ನಾಟಕದಲ್ಲಿ ಕೇವಲ ಲಿಂಗಪೂಜೆಯನ್ನಷ್ಟೇ ಮಾಡದೇ ನೂರಾರು ಹೊತ್ತಿಗೆಗಳನ್ನು ಲೋಕಾರ್ಪಣೆಗೊಳಿಸಿದ ಕನ್ನಡ ನಾಡಿನ ಏಕೈಕ ಮಠ ಎಂದರೆ ಅದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠ ಮಾತ್ರ.
ಮುಂಡರಗಿ: ವೀರಶೈವ- ಲಿಂಗಾಯತ ಜ್ವಲಂತ ಸಮಸ್ಯೆಗೆ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿಯವರು ರಚಿಸಿದ ಲಿಂಗಾಯತದ ಇರುವು, ವೀರಶೈವದ ಅರಿವು ಕೃತಿ ಮೂಲಕ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಇಡೀ ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಹೆಮ್ಮೆಯ ಧರ್ಮವೆಂದರೆ ವೀರಶೈವ ಲಿಂಗಾಯತವಾಗಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚೆನ್ನಬಸವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಅನ್ನದಾನೀಶ್ವರ ಶಿವಯೋಗಿಗಳ 156ನೇ ಯಾತ್ರಾ ಮಹೋತ್ಸವದ ಎರಡನೇ ದಿನ ಭಾನುವಾರ ಸಂಜೆ ಜರುಗಿದ ಭಕ್ತ ಹಿತಚಿಂತನ ಗೋಷ್ಠಿಯಲ್ಲಿ ಲಿಂಗಾಯತದ ಇರುವು, ವೀರಶೈವದ ಅರಿವು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಇಡೀ ಕರ್ನಾಟಕದಲ್ಲಿ ಕೇವಲ ಲಿಂಗಪೂಜೆಯನ್ನಷ್ಟೇ ಮಾಡದೇ ನೂರಾರು ಹೊತ್ತಿಗೆಗಳನ್ನು ಲೋಕಾರ್ಪಣೆಗೊಳಿಸಿದ ಕನ್ನಡ ನಾಡಿನ ಏಕೈಕ ಮಠ ಎಂದರೆ ಅದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠ ಮಾತ್ರ ಎಂದರು.
ಆ ತತ್ವ, ಈ ತತ್ವದ ಮಧ್ಯದಲ್ಲಿ ಮನುಷ್ಯತ್ವವನ್ನು ಮರೆಯುತ್ತಿದ್ದೇವೆ. ಇಂತಹ ಮನುಷ್ಯತ್ವವನ್ನು ನಮಗೆಲ್ಲರಿಗೂ ತೋರಿಸಿಕೊಟ್ಟವರು ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿಯವರು. ಅಂತಹ ಪೂಜ್ಯರು ಲಿಂಗಾಯತದ ಇರುವು, ವೀರಶೈವದ ಅರಿವು ಕೃತಿ ನಮಗೆಲ್ಲ ನೀಡಿದ್ದಾರೆ. ವೀರಶೈವ ಧರ್ಮ ಎಂದರೇನು? ಲಿಂಗಾಯತದ ವ್ಯವಸ್ಥೆ ಎಂದರೇನು ಈ ಕುರಿತು ಸ್ಪಷ್ಟವಾಗಿ ತಿಳಿಸಿದ್ದಾರೆ. 12ನೇ ಶತಮಾನದ ಬಸವಾದಿ ಶರಣರು ಹೇಳಿದ ತತ್ವಾದರ್ಶಗಳನ್ನು ನಾಡಿನಲ್ಲಿ ಜಾತಿ, ಮತ, ಅಂತ, ಪಂಗಡ, ವರ್ಗ ರಹಿತವಾಗಿ ದಾಸೋಹ, ಶಿಕ್ಷಣ ನೀಡಿದ ಕೀರ್ತಿ ವೀರಶೈವ ಲಿಂಗಾಯತ ಮಠಗಳಿಗೆ ಸಲ್ಲುತ್ತದೆ. ಅಂತಹ ಕಾರ್ಯಗಳನ್ನು ಇಲ್ಲಿನ ಅನ್ನದಾನೀಶ್ವರ ಮಠ ಮಾಡುತ್ತಾ ಬಂದಿದೆ ಎಂದರು.ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಿವಕುಮಾರ ಬಳೂಟಗಿ, ನರಗುಂದದ ಶಿವಕುಮಾರ ಸ್ವಾಮೀಜಿ ಸೇರಿದಂತೆ ಅನೇಕ ಹರಗುರು ಚರ ಮೂರ್ತಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನ್ನದಾನೀಶ್ವರ ಮಹಾತ್ಮೆ ಕನ್ನಡ ಚಲನಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ರಾಮಸ್ವಾಮಿ ಹೆಗಡಾಳ, ಕರಬಸಪ್ಪ ಹಂಚಿನಾಳ, ವೀರನಗೌಡ ಗುಡದಪ್ಪನವರ, ಎಂ.ಎಸ್. ಶಿವಶೆಟ್ಟಿ, ಡಾ. ಬಿ.ಜಿ. ಜವಳಿ, ಬಸವರಾಜ ಬನ್ನಿಕೊಪ್ಪ, ಯಾತ್ರಾ ಮಹೋತ್ಸದ ಅಧ್ಯಕ್ಷ ಕೈಲಾಸಪತಿ ಹಿರೇಮಠ, ಮಹೇಶ ಜಂತ್ಲಿ, ಶಿವು ವಾಲಿಕಾರ, ಆನಂದ ನಾಡಗೌಡ್ರ ಸೇರಿದಂತೆ ಎಲ್ಲ ಗೆಳೆಯರ ಬಳಗ ಉಪಸ್ಥಿತರಿದ್ದರು. ಎಸ್.ಎಸ್. ಮಠದ ಹಾಗೂ ಎಸ್.ಆರ್. ರಿತ್ತಿ ನಿರೂಪಿಸಿ, ವಂದಿಸಿದರು.