ಹೊರನಾಡಿನಲ್ಲಿ ವೈಭವದ ಅನ್ನಪೂರ್ಣೇಶ್ವರಿ ರಥೋತ್ಸವ

| Published : Mar 03 2025, 01:49 AM IST

ಹೊರನಾಡಿನಲ್ಲಿ ವೈಭವದ ಅನ್ನಪೂರ್ಣೇಶ್ವರಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೇವಿಯ ಉತ್ಸವ ಮೂರ್ತಿಯ ಸುತ್ತು ಸೇವೆ । ಬ್ರಹ್ಮರಥದಲ್ಲಿ ಅಲಂಕೃತ ದೇವಿಯ ಉತ್ಸವ ಮೂರ್ತಿ ವಿರಾಜಮಾನ । ವಿವಿಧ ಸೇವೆ, ಪೂಜೆ

ಕನ್ನಡಪ್ರಭ ವಾರ್ತೆ ಕಳಸ

ತಾಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಭಾನುವಾರ ಬೆಳಿಗ್ಗೆ ಪೂಜೆಯ ನಂತರ ಉತ್ಸವ ಮೂರ್ತಿಯ ಸುತ್ತು ಸೇವೆ ನಡೆದ ಬಳಿಕ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಟಿಸುತ್ತ, ಛತ್ರಿ ಛಾಮರ ಮಂಗಳವಾದ್ಯಗಳೊಂದಿಗೆ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಸುಂದರವಾಗಿ ಅಲಂಕರಿಸಿದ ಬ್ರಹ್ಮರಥದ ಬಳಿ ದೇವರನ್ನು ತರಲಾಯಿತು. ರಥದ ಬಳಿ ಬಂದ ಜಗನ್ಮಾತೆ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆಯನ್ನು ಮಾಡಲಾಯಿತು.

ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ವರ್ಷವಿಡಿ ಗರ್ಭಗುಡಿಯಲ್ಲಿರುವ ದೇವಿಯು ಬರುವಂತ ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದ ವಿಶೇಷ ದಿನದಲ್ಲಿ ಜಗನ್ಮಾತೆಯು ಹೊರಬಂದು ದಿವ್ಯ ರಥದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುವುದೇ ರಥೋತ್ಸವದ ವಿಶೇಷವಾಗಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರದ ಹೊರನಾಡು ಅನ್ನಪೂರ್ಣೆಶ್ವರಿ ಅಮ್ಮನ ದಿವ್ಯ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ರಥೋತ್ಸವದ ವಿವರಣೆ ನೀಡಿದ ಅವರು. ಶ್ರೀಕ್ಷೇತ್ರದಲ್ಲಿ ನಡೆಯುವ ರಥೋತ್ಸವದಲ್ಲಿ ಭಕ್ತರಿಗೆ ದೇವರ ದರ್ಶನ , ದೇವತಾ ಸಾನಿಧ್ಯ ಮತ್ತು ದೇವರ ಸೇವಾ ಕಾರ್ಯವು ನೇರವಾಗಿ ಲಭಿಸುವುದು. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಜಾತಿ ಭೇದ ಮರೆತು ಏಕ ಮನಸ್ಸಿನಿಂದ ಭಕ್ತಿ ಪ್ರಧಾನವಾಗಿ ರಥವನ್ನು ಎಳೆ ಯುವುದರೊಂದಿಗೆ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.

ರಥೋತ್ಸವಗಳಿಗೂ ಮಾನವ ಜೀವನದ ರಥಕ್ಕೂ ಒಂದಕ್ಕೊಂದು ಸಂಭಂಧವಿದೆ. ಜೀವನ, ಬದುಕು ಎಂಬ ರಥದಲ್ಲಿ ಸಂಸಾರದ ಒಳಗಿರುವ ಎಲ್ಲರೂ ಏಕ ಮನಸ್ಸಿನಿಂದ ರಥವನು ಎಳೆದಾಗ ಹೇಗೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವೋ ಹಾಗೆಯೇ ದೇವರ ರಥವನ್ನು ನಿಶ್ಕಲ್ಮಷದಿಂದ ಭಕ್ತಿಭಾವದಿಂದ ಎಳೆದಲ್ಲಿ ಒಳಗಿನ ಪರಮಾತ್ಮನನ್ನು ಕಾಣಲು ಸಾಧ್ಯ ಎಂದರು.

ರಥಗಳಲ್ಲಿ ದೇವರು ಕುಳಿತಾಗ ಅದು ಪ್ರತಿಯೊಬ್ಬ ಮನುಷ್ಯನು ಹಂತ ಹಂತವಾಗಿ ಗುರಿ ತಲುಪುವುದರ ಮೂಲಕ ಎತ್ತರಕ್ಕೆ ಬೆಳೆಯ ಬೇಕೆಂಬ ಸಂದೇಶವನ್ನು ನೀಡುತ್ತದೆ. ರಥೋತ್ಸವ ಎಂದರೆ ಅದು ಒಂದು ಹಬ್ಬದ ವಾತವಾರಣ. ರಥೋತ್ಸವಕ್ಕೆ ಬರುವ ಭಕ್ತರು ರಥೋತ್ಸವದ ನೆನಪಿಗಾಗಿ ದೇವಾಲಯದ ಸುತ್ತಲು ವಸ್ತುಗಳನ್ನು ಖರೀದಿಸುವುದು ಒಂದು ವಿಶೇಷ. ರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಅಮ್ಮನ ದರ್ಶನ ಪಡೆದರು ಎಂದರು.

ರಾಜಲಕ್ಷೀ ಬಿ. ಜೋಷಿ ಮತ್ತು ಕುಟುಂಬ ವರ್ಗದವರು ಮಹಿಳೆಯರಿಗೆ ಬಳೆ ಮತ್ತು ರವಿಕೆ ಕಣವನ್ನು ವಿತರಿಸಿದರು.

ಅಲಂಕೃತಗೊಂಡ ಭವ್ಯ ಬ್ರಹ್ಮ ರಥವನ್ನು ಶ್ವೇತ ವಸ್ತ್ರದಾರಿಗಳಾದ ಭಕ್ತಾದಿಗಳು ಎಳೆದರು. ರಥವೇರಿ ಕುಳಿತ ದೇವರ ಮೂರ್ತಿ ತನ್ಮಯವಾಗಿ, ಚಿನ್ಮಯ ಮೂರ್ತಿಯಾಗಿ ಕಂಗೊಳಿಸುತ್ತಿತ್ತು. ಈ ಒಂದು ಸುಂದರ ದೃಶ್ಯವನ್ನು ಭಕ್ತರು ಭಕ್ತಿಯಿಂದ ಕಣ್ತುಂಬಿಸಿಕೊಂಡರು.

ಈ ಸಂದರ್ಭದಲ್ಲಿ ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರೀಜಾ ಶಂಕರ್ ಜೋಷಿ ಕುಟುಂಬ ಪಾಲ್ಗೊಂಡು ರಥೋತ್ಸವವನ್ನು ಯಶಸ್ವಿಗೊಳಿಸಿದರು.