ಮಕ್ಕಳಿಗೆ ವಾರ್ಷಿಕೋತ್ಸವ ಉತ್ತಮ ವೇದಿಕೆ: ಜಿಗಣೇಹಳ್ಳಿ

| Published : Jan 30 2024, 02:04 AM IST

ಮಕ್ಕಳಿಗೆ ವಾರ್ಷಿಕೋತ್ಸವ ಉತ್ತಮ ವೇದಿಕೆ: ಜಿಗಣೇಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದರು.

- ಬೀರೂರು ಸಮೀಪದ ಯರೇಹಳ್ಳಿ ಸಹಿಪ್ರಾ ಶಾಲೆ ಶಾಲಾ ವಾರ್ಷಿಕೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ ಬೀರೂರು

ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು. ಜೊತೆಗೆ ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕ ಗಣ್ಯರು ಇಂದು ಉನ್ನತ ಸ್ಥಾನಗಳಲ್ಲಿ ಬೆಳಗುತ್ತಿದ್ದಾರೆ. ಇದಕ್ಕೆ ಸ್ಪೂರ್ತಿ ಎಂಬಂತೆ ಕಡೂರು ತಾಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿರುವ ದತ್ತು ರವರು ಇಂದು ನಮಗೆ ಕೈಗನ್ನಡಿಯಂತಿದ್ದಾರೆ ಎಂದರು.

ಶಿಕ್ಷಣ ಮುಂದಿನ ಉನ್ನತ ವರ್ಗಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಲ್ಲ. ಅದು ಅವರ ಜೀವನ ಸಿದ್ಧಪಡಿಸುವ ಪ್ರಕ್ರಿಯೆ . ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರಚನೆಗೆ ಒತ್ತು ನೀಡಬೇಕು. ಜೊತೆಗೆ ಶಾಲೆ ಬೆಳವಣಿಗೆಗೆ ಪೋಷಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಹುಲ್ಲೇಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣಪ್ಪ ಮಾತನಾಡಿ, ವಿದ್ಯೆ ಕದಿಯಲಾರದ ಸಂಪತ್ತು, ವಿದ್ಯಾರ್ಥಿ ಪ್ರಾಥಮಿಕ ಶಾಲಾ ಹಂತದಲ್ಲಿ ಕಲಿಕೆಯಲ್ಲಿ ಉತ್ತಮವಾಗಿ ಮುಂದುವರೆದಲ್ಲಿ ಅಂತಹ ವಿದ್ಯಾರ್ಥಿ ಜೀವನ ಮುಂದಿನ ದಿನಗಳಲ್ಲಿ ಸುಂದರ ವಾಗಿರುತ್ತದೆ. ತಾವು ಓದಿದ ಶಾಲೆ ಋಣತೀರಿಸಬೇಕಾದರೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದೆ ಸರ್ಕಾರಿ ಶಾಲೆಗೆ ಸೇರಿಸಿದರೇ ನಮ್ಮೂರಿನ ಶಾಲೆ ಉಳಿಯುತ್ತದೆ. ಶಾಲೆ ಅಭಿವೃದ್ಧಿಗೆ ಪಂಚಾಯ್ತಿಯಿಂದ ದೊರಕುವ ಅನುದಾನ ನೀಡಲು ಸಿದ್ದವಿದ್ದು, ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಬೇಕು ಎಂದರು.

ಜಿಲ್ಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಮೈಲಾರಪ್ಪ ಮಾತನಾಡಿ, ಎಲ್ಲಿ ಗ್ರಾಮಸ್ಥರು ಮತ್ತು ಶಿಕ್ಷಕರ ಒಡನಾಟ ಉತ್ತಮವಾಗಿರುತ್ತದೆಯೋ ಅಂತಹ ಸ್ಥಳದಲ್ಲಿ ಶಾಲೆಗಳ ಶಿಕ್ಷಣ ಗುಣಮಟ್ಟ ಉತ್ತಮಕ್ಕೆ ಕಾರಣೀಭೂತವಾಗಿರುತ್ತದೆ ಎಂದರು.

ಹುಲ್ಲೇಹಳ್ಳಿ ಗ್ರಾಪಂ ಅಧ್ಯಕ್ಷ ವೈ.ಪಿ.ಲೋಕೇಶ್ ಮಾತನಾಡಿ, ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಅವರ ಮೇಲೆ ಶಿಕ್ಷಕರ ಪ್ರಭಾವ ಬೀರುವುದರಿಂದ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹ ದಾರ್ಢ್ಯ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೆಸ್ಕಾಂ ಎಇಇ ಪುಟ್ಟಸ್ವಾಮಿ. ಶಿಕ್ಷಕ ಮರುಳಸಿದ್ದಪ್ಪ, ಎಸ್‌ಡಿಎಂಸಿ, ಅಧ್ಯಕ್ಷ ಹನುಮಂತಪ್ಪ, ರಘು ಸೇರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.

----

೨೮ ಬೀರೂರು ೧

ಬೀರೂರು ಸಮೀಪದ ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಉದ್ಘಾಟಿಸಿದರು.