ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದಲ್ಲಿರುವ ಭ್ರಷ್ಟ, ಲಂಚಕೋರ ಹಾಗೂ ಜನ ವಿರೋಧಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಕಿತ್ತೆಸೆಯೋವರೆಗೂ ತಾವು ವಿರಮಿಸೋದಿಲ್ಲವೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಮ್ಮ ಈ ಸಂಕಲ್ಪ ಸಾಕಾರಕ್ಕೆ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜನಾಶೀರ್ವಾದ ಕೋರಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಕಲಬುರಗಿಗೆ ಭೇಟಿ ನೀಡಿ ಇಲ್ಲಿನ ಬಿಜೆಪಿ ನೀಡಿದ ಅಭಿನಂದನೆ ಸ್ವೀಕರಿಸಿ ಹಾಗೂ ನೂತನ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿಯ ಅನೇಕ ಜನ, ರೈತ, ಮಹಿಲಾ ಕಲ್ಯಾಣ ಯೋಜನೆಗಳಿಗೆ ತಿಲಾಂಜಲಿ ಇಟ್ಟಿರುವ ಕಾಂಗ್ರೆಸ್ ಸರ್ಕಾರ ಕೆಲಸಕ್ಕೆ ಬಾರದ, ಎಲ್ಲಾ ಜನತೆಗೆ ಇಂದಿಗೂ ತಲುಪದ ಗ್ಯಾರಂಟಿ ಯೋಜನೆಗಳನ್ನು ಇಟ್ಟುಕೊಂಡು ಜನತೆಗೆ ತೊಂದರೆ ನೀಡುತ್ತಿದೆ. ಪಂಚ ಗ್ಯಾರಂಟಿ ಹೆಸೆರಲ್ಲಿ ಸಾಗಿರುವ ಅಧ್ವಾನಗಳಿಂದಾಗಿ ರಾಜ್ಯ ಆರ್ಥಿಕವಾಗಿ ಹಾದಿ ತಪ್ಪುವ ಭೀತಿ ಎದರಿಸುತ್ತಿದೆ ಎಂದು ಟೀಕಿಸಿದರು.ಬಿಜೆಪಿ ಸರ್ಕಾರದ ರೈತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಯೋಜನೆ, ತಮ್ಮ ತಂದೆ ಬಿಎಸ್ ಯಡಿಯೂರಪ್ಪನವರು ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡಲು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ವಿಮಾ ಯೋಜನೆಯಂತಹ ಅನೇಕ ಜನಪರ ಕಲ್ಯಾಣ ಯೋಜನೆಗಳಿಗೆ ಈ ಸರ್ಕಾರ ತಿಲಾಂಜಲಿ ಇಡುವ ಹುನ್ನಾರ ಮಾಡುತ್ತಿದೆ. ಇದಕ್ಕೆ ಬದಲಾಗಿ ಕೇಂದ್ರದ ಅಕ್ಕಿಯನ್ನ ತಾವೇ ಕೊಟ್ಟೇವೆಂದು ಪುಕ್ಕಟೆ ಪ್ರಚಾರಕ್ಕಿಳಿದಿದೆ. ಬಡವರ ವಿರೋಧಿ ಇಂತಹ ಸರ್ಕಾರ ರಾಜ್ಯದಲ್ಲಿ ಇರಲೇಕೂಡದು ಎಂದರು.
ಬಿಜೆಪಿ ಸಂಘಟನೆಗೆ ತಾವು ಒತ್ತು ನೀಡಿದ್ದಾಗಿ ಹೇಳಿದ ವಿಜಯೇಂದ್ರ ಅವರು, ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡುವ ಗೌರವವನ್ನೇ ಬೂತ್ ಮಟ್ಟದ ಪ್ರಮುಖರಿಗೂ ನೀಡುವ ಏಕೈಕ ಪಕ್ಷ ಬಿಜೆಪಿ ಎಂದು ಬಣ್ಣಿಸಿ ಪಕ್ಷದ ಸಂಘಟನೆಗೆ, ಗೆಲುವಿಗೆ ಸದಾ ಶ್ರಮಿಸುತ್ತ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಜನ ಮುಂದಾಗಲಿ ಎಂದು ಕರೆ ನೀಡಿದರು.ಸಚಿವ ಪ್ರಿಯಾಂಕ್ ಖರ್ಗೆಗೆ ಮಾತಲ್ಲೇ ಟಾಂಗ್ ನೀಡಿದ ವಿಜಯೇಂದ್ರ ಆಡಳಿತ ಹದಗೆಟ್ಟು ಹೋದರೂ ಈ ಸಚಿವರು ಇನ್ನೂ ಸಮರ್ಥನೆಗೆ ಇಳಿದಿದ್ದಾರೆ. ಜನ ವಿರೋಧಿ ಎಂದು ಅದಾಗಲೇ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ಪಟ್ಟ ಕಟ್ಟಿದ್ದಾರೆಂದು ತಿವಿದರು.
ರಾಮಭಕ್ತನಲ್ಲ ಎಂದ ಪ್ರೀಯಾಂಕ್ ಖರ್ಗೆಗೆ ಮಾತಲ್ಲೇ ತಿವಿದ ರಾಜುಗೌಡಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಭಿನಂದನಾ ಸಮಾರಂಭದಲ್ಲಿ ಆವೇಶದಿಂದ ಮಾತನಾಡಿದ ಸುರಪುರ ಮಾಜಿ ಶಾಸಕ ರಾಜೂಗೌಡ, ನಾನು ರಾಮಭಕ್ತ ಅಲ್ಲ ಎಂಬ ಸಚಿವ ಪ್ರೀಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ನೀ ರಾಮಭಕ್ತ ಅಲ್ಲ.. ನೀ ಯಾವ ಭಕ್ತ ಇದಿಯಾ ಅಂತ ನನಗ ಗೊತ್ತದ, ಇಬ್ರೆ ಸಿಕ್ಕಾಗ ಈ ಬಗ್ಗೆ ಮಾತಾಡೋಣ ಎಂದು ರೋಶಾವೇಶದಲ್ಲಿ ಹೇಳುತ್ತ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತಮ್ಮ ಭಾಷಣದುದ್ದಕ್ಕೂ ಏಕವಚನದಲ್ಲೇ ಪದಗಳನ್ನು ಪ್ರಯೋಗಿಸುತ್ತ ರಾಜುಗೌಡ ವಾಗ್ದಾಳಿ ನಡೆಸಿದರು.ಎಲ್ಲರು ರಾಮಭಕ್ತ ಆಗೋದಿಲ್ಲ ಪ್ರಿಯಾಂಕ್ ಖರ್ಗೆ, ರಾಮ ಭಕ್ತ ಆಗಲು ಪುಣ್ಯಬೇಕು, ನಿನಗೆ ಆ ಪಣ್ಯದ ಫಲವಿಲ್ಲವೆಂದು ಮಾತಲ್ಲೇ ಏಕ ವಚನದಲ್ಲೇ ಪ್ರಿಯಾಂಕ್ ಖರ್ಗೆಗೆ ಕುಟುಕಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ದೊಡ್ಡದಾದ ಬುದ್ಧವಿಹಾರ ಕಟ್ಟಿಸಿದ್ದಾರೆ. ಕಲಬುರಗಿ ಬುದ್ಧ ವಿಹಾರದ ಬಗ್ಗೆ, ಅಲ್ಲಿನ ವೈಭವದ ಬಗ್ಗೆ, ಇದನ್ನು ನಾವು ಹೆಮ್ಮೆಯಿಂದ ಹೇಳುತ್ತೇವೆ. ನಿಮ್ಮಂಗೆ ಹೊಟ್ಟೆ ಕಿಚ್ಚು ಪಡೋದಿಲ್ಲ, ಯಾಕೆ, ಕೇಸರಿ ಕಂಡ್ರೆ ನಿಮಗೆ ಹೊಟ್ಟೆ ಉರಿನಾ? ಎಂದು ಪ್ರಶ್ನಿಸಿದರು.ಹಿಂದೂ ಕಾರ್ಯಕರ್ತರು ಕಂಡ್ರೆ ನಿಮಗೆ ಆಗಲ್ವಾ? ಪೊಲೀಸರು, ಇತರೆ ಅಧಿಕಾರಿಗಳ ಮೂಲಕ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ಕೊಡ್ತಿರಾ? ಎಂದು ಪ್ರಿಯಾಂಕ್‌ಗೆ ಪ್ರಶ್ನೆಗಳ ಸುರಿಮಳೆ ಮಾಡುತ್ತಲೇ ಅಲ್ಲಿದ್ದ ಅಧಿಕಾರಿ, ಪೊಲೀಸರನ್ನು ಉದ್ದೇಶಿಸಿ, ಅಧಿಕಾರಿಗಳೇ ಎಚ್ಚರಿಕೆ ಇರಲಿ, ಈಗ ಅವರು ಅಧಿಕಾರದಲ್ಲಿದ್ದಾರೆ, ನಾಳೆ ನಾವು ಅಧಿಕಾರದಲ್ಲಿ ಬಂದೇ ಬರ್ತಿವಿ, ಆಗ ನಾವೂ ನೋಡ್ಕೋತೀವಿ ಎಂದರು.
ರಾಮಭಕ್ತರು ಅಂಜಬೇಕಿಲ್ಲ, ಅಳುಕಬೇಕಿಲ್ಲ, ನಿಮ್ಮ ಜೊತೆ ನಾವಿದ್ದೇವೆ. ರಾಮನ ಹೆಸರಲ್ಲಿ ನಾವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದೇ ಬರ್ತಿವಿ. ಕಲಬುರಗಿಯಿಂದ ಈಗಿರುವ ಸಂಸದ್ ಸದಸ್ಯರಾದ ಡಾ. ಉಮೇಶ ಜಾಧವ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ನಿಮ್ಮ ಉಡಿಯೊಳಗೆ ಹಾಕುತ್ತೇವೆ ಎಂದು ವಿಜಯೇಂದ್ರರನ್ನ ಉದ್ದೇಶಿಸಿ ಮಾಜಿ ಸಚಿವರೂ ಆಗಿರುವ ರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಡಾ. ಉಮೇಶ ಜಾಧವ್, ಮುಖಂಡರಾದ ಮಾಲೀಕಯ್ಯಾ ಗುತ್ತೇದಾರ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾತನಾಡಿ ಬಿಜೆಪಿ ಪಕ್ಷದ ಪರ ಜನಸಾಗರವೇ ಹೊರಟು ನಿಂತಿದೆ, ಲೋಕ ಸಮರದಲ್ಲಿ ಕಮಲ ಅರಳೋದು ನಿಶ್ಚಿತ ಎಂದರು. ವೇದಿಕೆಯಲ್ಲಿ ಪಿ. ರಾಜೀವ್, ಎಂಎಲ್‌ಸಿ ಬಿಜಿ ಪಾಟೀಲ್, ಶಶಿಲ್ ನಮೋಶಿ, ಉಪ ಮೇಯರ್ ಶಿವಾನಂದ ಪಿಸ್ತಿ, ಗ್ರಾಮೀಣ ಜಿಲ್ಲಾ ನೂತನ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಅವ್ವಣ್ಣ ಮ್ಯಾಕೇರಿ, ಅಂಬಾರಾಯ ಅಷ್ಟಗಿ, ಮೇಯರ್ ವಿಶಾಲ ಧರ್ಗಿ ಸೇರಿ ಹಲವರಿದ್ದರು.
ಜನರ ಹೃದಯದಲ್ಲಿದೆ ಕಮಲ ಬಾವುಟ: ಕಲಬುರಗಿಯಲ್ಲಿ ಬಿಜೆಪಿ ಸಮಾರಂಭಕ್ಕೂ ಮುಂಚೆಯೇ ಕಮಲ ಚಿಹ್ನೆಯ ಬಾವುಟಗಳನ್ನು ಕಿತ್ತೆಸೆದ ಪಾಲಿಕೆಯ ಕ್ರಮ ಖಂಡಿಸುತ್ತ ಅದರ ಹಿಂದೆ ಕಾಂಗ್ರೆಸ್ಸಿಗರ ಕುಮ್ಮಕ್ಕಿದೆ, ಈಗ ಇವರು ಅಧಿಕಾರ ಬಳಸಿಕೊಂಡು ಕಮಲ ಬಾವುಟ ಕಿತ್ತಿ ಬಿಸಾಕಬಹುದು, ಜನರ ಹೃದಯದಲ್ಲಿ ರಾಮನ, ಹನುಮಂತನ ಹಾಗೂ ಕಮಲ ಬಾವುಟಗಳು ಅಚ್ಚೊತ್ತಿವೆ. ಮುಂಬರುವ ಲೋಕ ಸಮರದಲ್ಲಿ ಕಾಯಂ ಆಗಿ ಕಮಲ ಧ್ವಜ ಮತ್ತೊಮ್ಮೆ ಎಲ್ಲೆಡೆ ಹಾರಾಡಲಿದೆ ಎಂದು ಮಾತನಾಡಿದ ಎಲ್ಲಾ ನಾಯಕರು ಹೇಳಿದರು.