ಒಂದೇ ಕಾಮಗಾರಿಗೆ ಹಲವು ಬಿಲ್‌: ಆರೋಪಿಗಳ ವಿರುದ್ಧ ಕ್ರಮ

| Published : Jan 30 2024, 02:04 AM IST

ಸಾರಾಂಶ

ಈ ಭಾಗದ ರಸ್ತೆಗಳು ತುಂಬಾ ಹಾಳಾಗಿದ್ದು, ೧೦ ವರ್ಷಗಳಿಂದ ಹಾಗೆಯೇ ಇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕಿಗೆ ೨೫ ಕೋಟಿ ರೂಗಳ ವಿಶೇಷ ಅನುದಾನ ನೀಡಿದ್ದು, ಪ್ರತೀ ಹೋಬಳಿಗೆ ೫ ಕೋಟಿ ರೂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಗ್ರಾಮದಿಂದ ಗ್ರಾಮಕ್ಕೆ ಹೋಗುವ ರಸ್ತೆಗಳಿಗೆ ಯಾರೂ ಸಿಮೆಂಟ್ ರಸ್ತೆ ಹಾಕುವುದಿಲ್ಲ. ಸಿಮೆಂಟ್ ರಸ್ತೆ ಮಾಡುಲಷ್ಟು ಸುಭಿಕ್ಷೆ ನಮಗಿನ್ನೂ ಬಂದಿಲ್ಲವೆಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಹೇಳಿದರು.

ತಾಲೂಕಿನ ಇರಗಂಪಲ್ಲಿಯಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಗರಡಿ ಮನೆ, ಗ್ರಂಥಾಲಯ ಹಾಗೂ ರಥದ ಕಟ್ಟಡಕ್ಕೆ ೩೦ ಲಕ್ಷ ರುಪಾಯಿಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ದುಡ್ಡು ಮಾಡಲು ಸಿಮೆಂಟ್‌ ರಸ್ತೆ

ತಾಲೂಕಿನ ಗಡಿ ಭಾಗವಾದ ಬಿಲ್ಲಾಂಡ್ಲಹಳ್ಳಿಯಿಂದ ಪುಟ್ಟುಗುಂಡ್ಲಹಳ್ಳಿಯವರೆಗೆ ಡಾಂಬರು ರಸ್ತೆ ಮಾಡುವುದರ ಬದಲಿಗೆ ಯಾರಿಗೋ ಸಹಾಯ ಮಾಡಲು ಹಾಗೂ ದುಡ್ಡು ಮಾಡುವ ಉದ್ದೇಶದಿಂದ ಮಾಜಿ ಶಾಸಕರು ಸಿಮೆಂಟ್ ರಸ್ತೆ ಮಾಡಿಸಿದ್ದಾರೆ. ೧೧ ಇಂಚು ಸಿಮೆಂಟ್ ರಸ್ತೆ ಮಾಡುವುದರ ಬದಲಿಗೆ ಒಂದು ಕಡೆ ೬ ಇಂಚು, ಇನ್ನೊಂದೆಡೆ ೪ ಇಂಚು, ಮತ್ತೊಂದೆಡೆ ೩ ಇಂಚು ಹಾಕಿದ್ದು ರಸ್ತೆಯ ಮಧ್ಯೆ ಬಿರುಕು ಬಿಟ್ಟಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆಯೆಂದರು.

ಭ್ರಷ್ಟರ ವಿರುದ್ಧ ಕಾನೂನು ಕ್ರಮ

ಈ ಭಾಗದಲ್ಲಿ ಒಂದೇ ರಸ್ತೆ ಕಾಮಗಾರಿಗೆ ಬೇರೆ ಬೇರೆ ಇಲಾಖೆಗಳಿಂದ ಹಣ ಡ್ರಾ ಮಾಡಿರುವ ಬಗ್ಗೆ ಮಾಹಿತಿ ಇದ್ದು,ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದು, ಅವ್ಯವಹಾರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಈ ಭಾಗದ ರಸ್ತೆಗಳು ತುಂಬಾ ಹಾಳಾಗಿದ್ದು, ೧೦ ವರ್ಷಗಳಿಂದ ಹಾಗೆಯೇ ಇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕಿಗೆ ೨೫ ಕೋಟಿ ರೂಗಳ ವಿಶೇಷ ಅನುದಾನ ನೀಡಿದ್ದು, ಪ್ರತೀ ಹೋಬಳಿಗೆ ೫ ಕೋಟಿ ರೂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದೆಂದರು.

ಸಾಲ ಮರುಪಾವತಿಸಿ

ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗಿರೆಡ್ಡಿ ಮಾತನಾಡಿ ನಿರ್ದೇಶಕನಾದ ಮೇಲೆ ೩೯೯೦ ಸಂಘಗಳಿಗೆ ಸಾಲ ಕೊಡುವುದರ ಮೂಲಕ ಸಚಿವ ಸುಧಾಕರ್‌ರವರ ಆಶಯ ಈಡೇರಿಸಿದ್ದೇನೆ. ಎಲ್ಲರೂ ಸಮಯಕ್ಕೆ ಸರಿಯಾಗಿ ಬಡ್ಡಿ ಸಮೇತ ಪಾವತಿಸಿದಲ್ಲಿ ನೀವು ಕಟ್ಟಿರುವ ಬಡ್ಡಿ ಹಣವನ್ನು ಸರ್ಕಾರ ಮತ್ತೆ ತಮ್ಮ ಖಾತೆಗೆ ಮರುಪಾವತಿ ಮಾಡುತ್ತದೆ ಎಂದರು. ಜಿ.ಪಂ.ಮಾಜಿ ಸದಸ್ಯ ಸ್ಕೂಲ್ ಸುಬ್ಬಾರೆಡ್ಡಿ ಮಾತನಾಡಿ, ಕೆಲವು ಪುಣ್ಯಾತ್ಮರು ಮೈಕ್ ಎತ್ತಿಕೊಂಡರೆ ಸೈಟುಗಳು ಮಾಡಿಕೊಡುತ್ತೇವೆಂದು ೫ ವರ್ಷಕೊಮ್ಮೆ ರೀಲು ಬಿಡುತ್ತಿದ್ದವರ ಆ ರೀಲುಗಳು ಈಗ ನಿಂತು ಹೋಗಿದ್ದು, ಮಾಡಿರುವ ಒಂದೇ ಕಾಮಗಾರಿಗೆ ಬೇರೆ ಬೇರೆ ಇಲಾಖೆಗಳಿಂದ ೪೦ ಲಕ್ಷ ರೂಗಳನ್ನು ಡ್ರಾ ಮಾಡಿಕೊಂಡಿದ್ದಾರೆಂದು ಆರೋಪಿಸಿದರು. ಸಮಾರಂಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ರಾಗುಟ್ಟಹಳ್ಳಿ ರಘುನಾಥ್, ಅಂಕಾಲಮಡುಗು ವಿಎಸ್‌ಎಸ್‌ಎನ್ ಅಧ್ಯಕ್ಷ ಎ.ಆರ್.ಚೌಡಪ್ಪ, ಬೊಮ್ಮೇಪಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ.ಎಸ್.ವೆಂಕಟರೆಡ್ಡಿ, ಮಾಜಿ ಅಧ್ಯಕ್ಷ ಆನಂದರೆಡ್ಡಿ, ಬೊಮ್ಮೇಪಲ್ಲಿ ವಿಎಸ್‌ಎಸ್‌ಎನ್ ಕಾರ್ಯದರ್ಶಿ ಬೈರೆಡ್ಡಿ, ಇರಗಂಪಲ್ಲಿ ಗ್ರಾ.ಪಂ. ಅಧ್ಯಕ್ಷ ರಘುನಾಥರೆಡ್ಡಿ, ಉಪಾಧ್ಯಕ್ಷೆ ಮಂಜುಳಮ್ಮ, ರಾಗುಟ್ಟಹಳ್ಳಿ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ, ಇರಗಂಪಲ್ಲಿ ಎಂಪಿಸಿಎಸ್ ಅಧ್ಯಕ್ಷ ಮಂಜುನಾಥರೆಡ್ಡಿ ಉಪಸ್ಥಿತರಿದ್ದರು.