ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರತಿಟನ್ ಕಬ್ಬಿಗೆ ₹3450 ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಗುರುವಾರ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಸಕ್ಕರೆ ಸಂಶೋಧನಾ ಸಂಸ್ಥೆಯ ಆವರಣದಲ್ಲೇ ರೈತರು ರಸ್ತೆಯ ಮೇಲೆ ಮಲಗಿದರು. ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲಿಯೂ ಕಬ್ಬಿನ ದರ ಘೋಷಣೆ ಮಾಡಬೇಕು. ನಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡಬೇಕು. ಕಬ್ಬಿನ ದರ ನಿಗದಿಯಾಗದೇ ಹೊರತು ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ರೈತರು ಪಟ್ಟುಹಿಡಿದರು.ಕಳೆದ ವರ್ಷ ಕಿಲೋ ಸಕ್ಕರೆಗೆ ₹30 ದರ ಇದ್ದ ವೇಳೆ ಪ್ರತಿಟನ್ ಕಬ್ಬಿಗೆ ₹ 3000 ದರ ನಿಗದಿ ಮಾಡಲಾಗಿತ್ತು. ಆದರೆ, ಈಗ ಕಿಲೋ ಸಕ್ಕರೆಗೆ ₹40 ದರ ಇದೆ. ಹಾಗಾಗಿ, ಪ್ರತಿಟನ್ ಕಬ್ಬಿಗೆ ₹3450 ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾನಿರತ ರೈತರ ಮನವೊಲಿಕೆಗೆ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ರೈತರು ಮಾತ್ರ ಕಬ್ಬಿನ ದರ ನಿಗದಿಯಾಗುವವರೆಗೆ ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದರು. ಕಬ್ಬಿಗೆ ದರ ನಿಗದಿ ಸಂಬಂಧ ಸಕ್ಕರೆ ಸಚಿವರು ಹಾಗೂ ಸಕ್ಕರೆ ಸಂಸ್ಥೆಯ ಆಯುಕ್ತರನ್ನು ಸ್ಥಳಕ್ಕೆ ಕರೆಸಬೇಕು ಎಂದು ಆಗ್ರಹಿಸಿದರು.ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾನ, ಮರ್ಯಾದೆ ಇದೆಯೇ? ರೈತರ ಮೇಲೆ ಪ್ರೀತಿ, ಕರುಣೆ ಇದ್ದರೆ ಕೂಡಲೇ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕಬ್ಬಿನ ದರ ಘೋಷಣೆ ಮಾಡಬೇಕು. ಇವರೇನು ನಮಗೆ ಭಿಕ್ಷೆ ಕೊಡುತ್ತಾರೆಯೇ? ನಾವು ಕರ್ನಾಟಕದಲ್ಲಿ ಹುಟ್ಟಿದ್ದೇ ತಪ್ಪಾ? ಮಹಾರಾಷ್ಟ್ರದಲ್ಲಿ ಹುಟ್ಟಬೇಕಾಗಿತ್ತಾ? ನಮ್ಮ ಮೇಲೆ ಗೋಲಿಬಾರ್ ಮಾಡಿ, ಲಾಠಿ ಚಾರ್ಚ್ ಮಾಡಿ, ನಾವು ಎಲ್ಲದ್ದಕ್ಕೂ ಸಿದ್ದರಿದ್ದೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಪ್ರತಿಭಟನಾನಿರತ ರೈತರು, ಕಬ್ಬಿನ ದರ ನಿಗದಿಯಾದ ಬಳಿಕವೇ ನಾವು ಇಲ್ಲಿಂದ ಹೋಗುತ್ತೇವೆ. ಇಲ್ಲದಿದ್ದರೆ ಇಲ್ಲಿಯೇ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಾವೇನು ಉಚಿತವಾಗಿ ಬೆಲೆ ಕೇಳುತ್ತಿಲ್ಲ. 12 ತಿಂಗಳ ಕಾಲ ಕಬ್ಬನ್ನು ಬೆಳೆದು, ಕಾರ್ಖಾನೆಗೆ ಪೂರೈಸುತ್ತೇವೆ. ಅಗತ್ಯ ವಸ್ತುಗಳ ದರವೂ ದುಪ್ಪಟ್ಟಾಗಿದೆ. ಹಾಗಾಗಿ, ಕಬ್ಬಿನ ದರವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.ಕಬ್ಬಿನ ತೂಕದಲ್ಲಿ ಮೋಸ- ರೈತರ ಆಕ್ರೋಶ:ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತ ಮುಖಂಡರ ಸಭೆಯಲ್ಲಿ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು. ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಆಗುತ್ತಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ದರ, ತೂಕದಲ್ಲಿ, ಸಾರಿಗೆ, ಕಟಾವು ಸೇರಿದಂತೆ ಎಲ್ಲ ರೀತಿಯಿಂದಲೂ ರೈತರಿಗೆ ಮೋಸ ಆಗುತ್ತಿದೆ. 3-4 ಟನ್ ಮೋಸ್ ಮಾಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಯವರು ತಮಗೆ ಬೇಕಾದಂತೆ ಕಾನೂನು ಮಾಡಿಕೊಂಡಿದ್ದಾರೆ. ಕಾರ್ಖಾನೆಗಳಲ್ಲಿ ಅಳವಡಿಸಿರುವ ಕಂಪ್ಯೂಟರೀಕರಣ ಬಿಲ್ ಕೊಡುವ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ರೈತರು ಆಗ್ರಹಿಸಿದರು.ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ, ಎಂ.ಕೆ.ಹುಬ್ಬಳ್ಳಿ ಮಲಪ್ರಬಾ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆ ನಡೆಯುತ್ತಿದೆ. ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆ ಶುರು ಮಾಡಬೇಕಿದೆ. ಬಾಕಿ ಬಿಲ್ ಸೇರಿದಂತೆ ಮತ್ತಿತರ ಸಮಸ್ಯೆಗಳ ಕುರಿತು ಚರ್ಚಿಸಲು ಅ.17 ರಂದು ಬೆಂಗಳೂರಿನಲ್ಲಿ ಸಕ್ಕರೆ ಸಂಸ್ಥೆಯ ಆಯುಕ್ತರನ್ನು ಭೇಟಿಯಾಗಿ, ಸಭೆ ಮಾಡಲಾಗುವುದು. 20 ಜನ ರೈತ ಮುಖಂಡರು ಬೆಂಗಳೂರಿಗೆ ಬರಬೇಕು. ಅಲ್ಲಿಯೇ ಎಲ್ಲ ವಿಚಾರಗಳನ್ನು ಚರ್ಚಿಸೋಣ. ಮೊದಲ ಸಭೆಯನ್ನು ಅಲ್ಲಿಯೇ ಮಾಡೋಣ ಎಂದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಬಿ.ಕೋಳೇಕರ ಮತ್ತಿತರರು ಉಪಸ್ಥಿತರಿದ್ದರು.