ಹೊರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಕಬ್ಬಿಗೆ ಪ್ರೋತ್ಸಾಹ ಧನ ಘೋಷಿಸಿ

| Published : Nov 08 2025, 01:30 AM IST

ಹೊರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಕಬ್ಬಿಗೆ ಪ್ರೋತ್ಸಾಹ ಧನ ಘೋಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಕಾರ್ಖಾನೆಗಳಲ್ಲಿ ಬಹುತೇಕ ರಾಜಕಾರಣಿಗಳೇ ನಡೆಸುತ್ತಿರುವ ಕಾರ್ಖಾನೆಗಳಾಗಿವೆ. ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿನಿಂದ 14 ಸಾವಿರದವರೆಗೆ ಲಾಭ ಗಳಿಸುತ್ತಿವೆ. ಕಾರ್ಖಾನೆ ಮಾಲೀಕರು ತಮ್ಮ ಹಿತಾಸಕ್ತಿ ನೋಡುತ್ತಾರೆಯೇ ಹೊರತು ರೈತರ ಹಿತಾಸಕ್ತಿ ನೋಡುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಟನ್ ಕಬ್ಬಿಗೆ 3500 ರು. ಬೆಂಬಲ ಬೆಲೆ ನೀಡುವ ಜೊತೆಗೆ ಹೊರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಕಬ್ಬಿಗೆ ಪ್ರೋತ್ಸಾಹ ಧನ ಘೋಷಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ರಾಜ್ಯದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಕಾರ್ಖಾನೆಗಳಲ್ಲಿ ಬಹುತೇಕ ರಾಜಕಾರಣಿಗಳೇ ನಡೆಸುತ್ತಿರುವ ಕಾರ್ಖಾನೆಗಳಾಗಿವೆ. ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿನಿಂದ 14 ಸಾವಿರದವರೆಗೆ ಲಾಭ ಗಳಿಸುತ್ತಿವೆ. ಕಾರ್ಖಾನೆ ಮಾಲೀಕರು ತಮ್ಮ ಹಿತಾಸಕ್ತಿ ನೋಡುತ್ತಾರೆಯೇ ಹೊರತು ರೈತರ ಹಿತಾಸಕ್ತಿ ನೋಡುವುದಿಲ್ಲ ಎಂದು ದೂರಿದರು.

ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ವಸ್ತುಗಳ ಮೇಲೆ ರಾಜ್ಯ ಜಿಎಸ್‌ಟಿ ತೆರಿಗೆಯನ್ನು ಸರ್ಕಾರ ಪಡೆದುಕೊಳ್ಳುತ್ತಿದೆ. ಇದರ ಸ್ವಲ್ಪ ಭಾಗವನ್ನಾದರೂ ರೈತನಿಗೆ ಕೊಟ್ಟರೆ ಉಳಿದುಕೊಳ್ಳುತ್ತಾನೆ ಎಂದು ಜಿಲ್ಲಾಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಉತ್ತರ ಕರ್ನಾಟಕದ ಭಾಗದಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ ಕನಿಷ್ಠ 3500 ದರ ನಿಗದಿಪಡಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ಎಫ್.ಆರ್.ಪಿ. ದರ 3550 ರು. ನಿಗದಿಪಡಿಸಿದೆ. ಸಕ್ಕರೆ ಅಂಶದ ಇಳುವರಿ ಆಧಾರದ ಮೇಲೆ ನಿಗದಿಪಡಿಸಿದ್ದರೂ ಕಾರ್ಖಾನೆಗಳು ಪಾರದರ್ಶಕವಾಗಿ ಸಕ್ಕರೆ ಅಂಶ ತೋರಿಸದೇ ಮೋಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ತಾಕಿನಲ್ಲೇ ರೈತರ ಎದುರೇ ಸಕ್ಕರೆ ಅಂಶವನ್ನು ವೈಜ್ಞಾನಿಕವಾಗಿ ಮಾಡಬಹುದು ಹಾಗೂ ಆ ಸಕ್ಕರೆ ಅಂಶ ಆಧಾರದ ಮೇಲೆ ದರವನ್ನು ಸ್ಥಳದಲ್ಲೇ ನಿಗದಿಪಡಿಸಬಹುದು. ಇದನ್ನು ಕಾರ್ಖಾನೆಗಳು ಮಾಡುತ್ತಿಲ್ಲ. ಕಬ್ಬಿನ ತೂಕದಲ್ಲೂ ರೈತರಿಗೆ ಮೊಸ ಮಾಡುತ್ತಿವೆ. ಸರ್ಕಾರವೇ ತೂಕ ಮಾಪನ ನಿರ್ವಹಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವು ಸಹ ರೈತರ ಪರವಾಗಿ ನಿಲ್ಲದೇ ತೇಪೆ ಹಾಕುವ ತಂತ್ರವನ್ನು ಮಾಡುತ್ತಿದೆ. ಸಕ್ಕರೆ ಸಚಿವರು ಸಕ್ಕರೆ ಕಾರ್ಖಾನೆಗಳ ಕಷ್ಟ ಸುಖದ ಬಗ್ಗೆ ಮಾತನಾಡುತ್ತಾರೆಯೇ ಹೊರತು ಸಚಿವರಿಗೆ ರೈತರ ಕಷ್ಟ ಸುಖ ಬೇಕಾಗಿಲ್ಲ ಕಿಡಿಕಾರಿದರು.

ಮೈಷುಗರ್ ಕಾರ್ಖಾನೆ ಕಳೆದ ಹಲವಾರು ವರ್ಷಗಳಂತೆ ಈ ಬಾರಿಯೂ ಅತ್ಯಂತ ರೋಗಗ್ರಸ್ಥವಾಗಿ ಕುಂಟುತ್ತಾ ಸಾಗಿ ಕಬ್ಬನ್ನು ಅರೆಯದೆ ನಿಲ್ಲಿಸಿದೆ. ಪ್ರತಿ ವರ್ಷ ಸಾರ್ವಜನಿಕ ತೆರಿಗೆ ಹಣವನ್ನು ಸರ್ಕಾರದಿಂದ ತಂದು ಬಳಸಿ ಕಾರ್ಖಾನೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರಕ್ಕೂ ಲಾಭವಿಲ್ಲ. ರೈತನಿಗೂ ಉಪಯೋಗವಿಲ್ಲ. ಇದರ ಬಗ್ಗೆ ಸೂಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡು ರೋಗಗ್ರಸ್ಥದಿಂದ ಪಾರು ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು, ಜಿಲ್ಲಾಧ್ಯಕ್ಷ ಬಿ.ಪಿ. ಅಪ್ಪಾಜಿ ಬೂದನೂರು ಇತರರು ಭಾಗವಹಿಸಿದ್ದರು.