ಸಾರಾಂಶ
ಅಭ್ಯರ್ಥಿ ಯಾರು ಎಂಬ ಪಟ್ಟಿಯನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಿ ಕೊಡುತ್ತೇವೆ. ಬುಧವಾರ ಅಥವಾ ಗುರುವಾರ ಅಂತಿಮ ತೀರ್ಮಾನವಾಗಲಿದ್ದು, ಮೂರೂ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿಯ ಗುರಿಯಾಗಿದೆ. ಗೆಲ್ಲಿಸಲು, ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ಉಪಚುನಾವಣೆ ಘೋಷಣೆಯಾಗಿದೆ. ಚನ್ನಪಟ್ಟಣ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಬುಧವಾರ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸಂಡೂರು ಮತ್ತು ಶಿಗ್ಗಾವಿ ಬಗ್ಗೆ ಮಂಗಳವಾರ ರಾತ್ರಿ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.ಅವರು ಮಂಗಳವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅಭ್ಯರ್ಥಿ ಯಾರು ಎಂಬ ಪಟ್ಟಿಯನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಿ ಕೊಡುತ್ತೇವೆ. ಬುಧವಾರ ಅಥವಾ ಗುರುವಾರ ಅಂತಿಮ ತೀರ್ಮಾನವಾಗಲಿದ್ದು, ಮೂರೂ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿಯ ಗುರಿಯಾಗಿದೆ. ಗೆಲ್ಲಿಸಲು, ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ತಿಳಿಸಿದರು.ಸಿ.ಪಿ. ಯೋಗೇಶ್ವರ್ ಅವರ ಬಂಡಾಯ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಅವರ ಸಂಪರ್ಕದಲ್ಲಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರು ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಆ ರೀತಿ ಯಾವುದೇ ನಿರ್ಧಾರ ಯೋಗೇಶ್ವರ್ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.
---------------ಕಾಂಗ್ರೆಸಲ್ಲಿ ಸಿದ್ರಾಮಯ್ಯ ರಾಜೀನಾಮೆಗೆ ಕಾಯುತ್ತಿದ್ದಾರೆ
ಈಗಾಗಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ರೇಸ್‌ನಲ್ಲಿ ಇರುವವರ ಪಟ್ಟಿ ದೊಡ್ಡದಿದೆ. ಸದ್ಯದಲ್ಲೇ ಯಾರ್ಯಾರು ಇದ್ದಾರೆ ಅನ್ನೋದು ಬಹಿರಂಗವಾಗಲಿದೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕಾದ ಸಂದರ್ಭ ಬಂದಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಅನೇಕ ಹಿರಿಯರು ಕಾಯುತ್ತಿದ್ದು, ಸಿದ್ದರಾಮಯ್ಯ ರಾಜೀನಾಮೆ ಕೊಡುವುದನ್ನು ಕಾಯುತ್ತಿದ್ದಾರೆ ಎಂದು ವ್ಯಂಗ್ಯನಾಡಿದರು.