ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜನರನ್ನು ನಿರಾಸೆಗೊಳಿಸದೆ ಸಮಾಧಾನ ಪಡಿಸುವ ಕೊಡುಗೆಗಳನ್ನು ನೀಡಿ ತುಟಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.
ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಇಕ್ಬಾಲ್ ಹುಸೇನ್ , ಬಾಲಕೃಷ್ಣ ಹಾಗೂ ಸಿ.ಪಿ.ಯೋಗೇಶ್ವರ್ ರವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಹೊಸ ಯೋಜನೆಗಳನ್ನು ತರುತ್ತಾರೆ ಎಂದು ಜನರು ಭಾವಿಸಿದ್ದರು.ಅಲ್ಲದೆ, ಈಗ ಗ್ರಾಮ ಪಂಚಾಯಿತಿ ಮಾತ್ರವಲ್ಲದೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣಾ ವರ್ಷ ಆಗಿರುವ ಕಾರಣ ಆಯವ್ಯಯದಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಭರಪೂರ ಕೊಡುಗೆ ಸಿಗುತ್ತದೆ ಎಂದು ಜನರು ಬೆಟ್ಟದಷ್ಟು ಹೊಂದಿದ್ದ ನಿರೀಕ್ಷೆಗಳೆಲ್ಲವೂ ಹುಸಿಗೊಂಡಿವೆ.
ಕೆಂಗೇರಿಯಿಂದ ಬಿಡದಿ ಮತ್ತು ಹಾರೋಹಳ್ಳಿವರೆಗೆ ನಮ್ಮ ಮೆಟ್ರೋ ವಿಸ್ತರಣೆ, ಚನ್ನಪಟ್ಟಣ - ರಾಮನಗರ ಅವಳಿ ನಗರ , ಬೊಂಬೆ ಉದ್ಯಮದ ಚೇತರಿಕೆಗೆ ವಿಶೇಷ ಕ್ಲಸ್ಟರ್ ಘೋಷಣೆ ಸೇರಿದಂತೆ ಬಹುತೇಕ ಪ್ರಮುಖ ಯೋಜನೆಗಳತ್ತ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಗಮನ ಹರಿಸಿಲ್ಲ.ಪರಿಷ್ಕೃತ ಡಿಪಿಆರ್ ಸಲ್ಲಿಕೆ :
ತಮಿಳುನಾಡು ವಿರೋಧಿಸುತ್ತಿರುವ ದೀರ್ಘಕಾಲದಿಂದ ಬಾಕಿ ಇರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್)ಗಾಗಿ ರಾಜ್ಯ ಸರ್ಕಾರ ನೂರಾರು ಕೋಟಿ ರುಪಾಯಿ ವೆಚ್ಚ ಮಾಡಿತ್ತು. ಇದೀಗ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಕಾವೇರಿ ಕೊಳ್ಳದ ಪ್ರಮುಖ ನೀರಾವರಿ ಯೋಜನೆಯಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ತೆಗೆದಿದ್ದ ತಕರಾರನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಯೋಜನೆ ಕಾರ್ಯರೂಪಕ್ಕೆ ತರಲು ರಾಜ್ಯ ಜಲಸಂಪನ್ಮೂಲ ಇಲಾಖೆ ಸಿದ್ಧವಾಗಿದೆ. ಈ ಯೋಜನೆಗೆ ಅರಣ್ಯ ಪ್ರದೇಶ ಸಹ ಮುಳುಗಡೆಯಾಗಲಿರುವ ಕಾರಣ ಸಿಡಬ್ಲ್ಯೂಸಿ ಜತೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಸಹ ಅಗತ್ಯವಿದೆ. ಈ ಅನುಮತಿ ದೊರೆತಲ್ಲಿ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ಸಿಕ್ಕಂತಾಗಲಿದೆ.
ರೇಷ್ಮೆ ನಾಡಲ್ಲಿ ಸಿಲ್ಕ್ ಪಾರ್ಕ್ ಕ್ರಾಂತಿ :ರೇಷ್ಮೆ ಉದ್ದಿಮೆಯನ್ನು ಒಂದೇ ಸೂರಿನಡಿ ವ್ಯವಸ್ಥಿತಗೊಳಿಸಲು ರಾಜ್ಯ ಸರ್ಕಾರ ರಾಮನಗರದಲ್ಲಿ ಅತ್ಯಾಧುನಿಕ ಸಿಲ್ಕ್ ಪಾರ್ಕ್ ಸ್ಥಾಪನೆಗೆ ಒಲವು ತೋರಿದೆ. ಈ ಪಾರ್ಕ್ ಗಳು ರೇಷ್ಮೆಗೂಡು ಮಾರಾಟದಿಂದ ಹಿಡಿದು ನೂಲು ಚಿಚ್ಚಾಣಿಕೆ ಮತ್ತು ಸಿದ್ಧ ಉಡುಪುಗಳ ತಯಾರಿಕೆವರೆಗಿನ ಎಲ್ಲಾ ಸೌಲಭ್ಯಗಳನ್ನು ಹೊಂದಿರಲಿದೆ. ಅಲ್ಲದೆ, ಸ್ಥಳೀಯವಾಗಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
ದೂರದ ಮಾರುಕಟ್ಟೆಗಳಿಗೆ ರೇಷ್ಮೆ ಗೂಡು ಸಾಗಿಸುವ ಉತ್ತರ ಕರ್ನಾಟಕದ ರೈತರ ಹಿತೃಷ್ಟಿಯಿಂದ ಸಾಗಾಣಿಕಾ ವೆಚ್ಚದ ಸಹಾಯಧನವನ್ನು ಪ್ರತಿ ಕೆ.ಜಿ.ಗೆ 10 ರಿಂದ 20 ರು.ಗೆ ದುಪ್ಪಟ್ಟುಗೊಳಿಸಲಾಗಿದೆ. ಹಾವೇರಿ ,ಕಲ್ಬುರ್ಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ರೇಷ್ಮೆ ಗೂಡನ್ನು ರಾಮನಗರ ಅಥವಾ ಶಿಡ್ಲಘಟ್ಟದಂತಹ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಅನಿವಾರ್ಯತೆ ಇತ್ತು. ಈಗ ಸರ್ಕಾರ ಸಾಗಾಣಿಕಾ ವೆಚ್ಚ ಹೆಚ್ಚಳ ಮಾಡಿರುವುದು ರೈತರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಿದೆ.ದಲಿತ ಕವಿ - ವೃಕ್ಷ ಮಾತೆಗೆ ಗೌರವ :
ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ದಿ.ಡಾ.ಸಿದ್ದಲಿಂಗಯ್ಯ ಮೂಲತಃ ಮಾಗಡಿ ತಾಲೂಕು ಮಂಚನಬೆಲೆ ಗ್ರಾಮದವರು. ಜಾತಿ ಪದ್ಧತಿ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧದ ಹೋರಾಟಗಳಿಗೆ ತಮ್ಮ ತೀಕ್ಷ್ಣವಾದ ಕಾವ್ಯಗಳ ಮೂಲಕ ಧ್ವನಿಯಾದವರು. ಅವರ ಹೆಸರಿನಲ್ಲಿ ಟ್ರಸ್ಟ್ ರಚನೆಗೆ ಸರ್ಕಾರ ಮುಂದಾಗಿದೆ.ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಗಿಡ , ಮರಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುತ್ತಿದ್ದವರು. ಕಳೆದ ನವೆಂಬರ್ ತಿಂಗಳಲ್ಲಿ ಇಹಲೋಕ ತ್ಯಜಿಸಿದವರು. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಕಾರ್ಯವನ್ನು ಗುರುತಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿವೆ. ಇದೀಗ ರಾಜ್ಯ ಸರ್ಕಾರ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇವರ ಸ್ಮರಣಾರ್ಥ ಹುಲಿಕಲ್ - ಕುದೂರು ಹತ್ತಿರ ಸ್ಮಾರಕ ನಿರ್ಮಾಣ ಮಾಡುವುದಾಗಿ ಘೋಷಿಸಿದೆ.
ಕನಕಪುರದಲ್ಲಿ ಕ್ರೀಡಾಂಗಣ ನಿರ್ಮಾಣ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರ ಕನಕಪುರದಲ್ಲಿ 2 ಕೋಟಿ ರುಪಾಯಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ, ರಾಮನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಹಾಗೂ ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಬಿಎಂಆರ್ ಡಿಎ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನೆಲಮಂಗಲ - ತಾವರೆಕೆರೆ- ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಬಾಕ್ಸ್ ...........ಶ್ರೀರಂಗ ಕುಡಿಯುವ ನೀರಿನ ಯೋಜನೆಈ ವರ್ಷದಲ್ಲಿ ಶ್ರೀರಂಗ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಜಲ ಸಂಪನ್ಮೂಲ ಇಲಾಖೆ ವತಿಯಿಂದ ಕನಕಪುರ ಪಟ್ಟಣದಲ್ಲಿ ಅರ್ಕಾವತಿ ನದಿ ತೀರ ಅಭಿವೃದ್ಧಿ, ರಾಮನಗರ ಹಾಗೂ ಕನಕಪುರ ತಾಲೂಕುಗಳಲ್ಲಿ 46 ಕೆರೆಗಳನ್ನು ತುಂಬಿಸುವ ಯೋಜನೆ, ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಾಗಡಿ ತಾಲೂಕಿನ ಗೌರಮ್ಮನ ಕೆರೆ ಹಳ್ಳಕ್ಕೆ ಡ್ರೈನ್ ನಿರ್ಮಾಣ, ಕನಕಪುರ ತಾಲೂಕಿನ ಹೊಸದೊಡ್ಡಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ.ಕಾರ್ಮಿಕ ಇಲಾಖೆ ವತಿಯಿಂದ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಕ್ಷೇತ್ರಗಳಲ್ಲಿ ಶ್ರಮಿಕ ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು. ಲೋಕೋಪಯೋಗಿ ಇಲಾಖೆ ವತಿಯಿಂದ ಮಾಗಡಿ - ಹುಣಸನಹಳ್ಳಿ (ತಮಿಳುನಾಡು ಗಡಿ) (ರಾಮನಗರ , ಕನಕಪುರ ಮಾರ್ಗ ) 95 ಕಿ.ಮೀ ರಸ್ತೆ ನಿರ್ಮಾಣಗೊಳ್ಳಲಿದೆ.
ಬಾಕ್ಸ್..........ರಾಜ್ಯ ಬಜೆಟ್ - ಬೆಂ.ದಕ್ಷಿಣ ಜಿಲ್ಲೆಗೆ ಸಿಕ್ಕಿದ್ದೇನು ?
1.ರಾಮನಗರ , ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲ್ಬುರ್ಗಿಯಲ್ಲಿ ಸಿಲ್ಕ್ ಪಾರ್ಕ್ ಗಳ ಸ್ಥಾಪನೆ.2.ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯವು ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಗಳು ವಜಾಗೊಂಡಿರುವುದು ಕರ್ನಾಟಕ ಮಹತ್ವದ ಕಾನೂನು ಜಯವಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್ ) ಶೀಘ್ರವೇ ಸಿದ್ಧಪಡಿಸಿ ಅನುಮೋದನೆಗೆ ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
3. ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ - ತಾವರೆಕೆರೆ - ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು ಬಿಎಂಆರ್ ಡಿಎ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನಿರ್ಮಾಣ.4.ದಲಿತ ಕವಿ ಸಿದ್ದಲಿಂಗಯ್ಯ ಹೆಸರಿನಲ್ಲಿ ಟ್ರಸ್ಟ್ ರಚಿಸಲು ಕ್ರಮ ಕೈಗೊಳ್ಳಲಾಗಿದೆ.
5.ಕನಕಪುರದಲ್ಲಿ 2 ಕೋಟಿ ರುಪಾಯಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ6. ಕರ್ನಾಟಕದ ಪ್ರಸಿದ್ಧ ಪರಿಸರವಾದಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇವರ ಸ್ಮರಣಾರ್ಥ ಹುಲಿಕಲ್ - ಕುದೂರು ಹತ್ತಿರ ಸ್ಮಾರಕ ನಿರ್ಮಾಣ.
7.ರಾಮನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ6ಕೆಆರ್ ಎಂಎನ್
1.ಮೇಕೆದಾಟು2.ರೇಷ್ಮೆ
3.ದಲಿತ ಕವಿ ಸಿದ್ದಲಿಂಗಯ್ಯ4.ಸಾಲುಮರದ ತಿಮ್ಮಕ್ಕ
5.ವರ್ತುಲ ರಸ್ತೆ