ನಾಟಕಕಾರ ಬಿ.ವಿ.ಕಾರಂತರ ಜನ್ಮದಿನ : ಹಿರಿಯ ಕಲಾವಿದರಿಗೆ ಇನ್ಮುಂದೆ 3000 ರು.ಮಾಶಾಸನ ಘೋಷಣೆ

| Published : Sep 20 2024, 01:37 AM IST / Updated: Sep 20 2024, 06:21 AM IST

ಸಾರಾಂಶ

ಹಿರಿಯ ಕಲಾವಿದರಿಗೆ ಮುಂದಿನ ತಿಂಗಳಿಂದ 3000 ರು ಮಾಸಾಶನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಬೆಂಗಳೂರು : ಹಿರಿಯ ನಾಟಕಕಾರ ಬಿ.ವಿ.ಕಾರಂತರ ಜನ್ಮದಿನದ ದಿನವೇ 93 ಮಂದಿ ಕಲಾವಿದರಿಗೆ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸ ತಂದಿದೆ. ಕಲೆ ಮತ್ತು ಕಲಾವಿದರು ಬೆಳೆಯಬೇಕು. ಪ್ರಶಸ್ತಿಗಳನ್ನು ಎರಡ್ಮೂರು ವರ್ಷಗಳು ನಿಲ್ಲಿಸಿ , ಬಳಿಕ ವಿತರಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಆಯಾ ವರ್ಷದ ಪ್ರಶಸ್ತಿಗಳನ್ನು ವಿಳಂಬ ಮಾಡದೇ ಅದೇ ವರ್ಷದಲ್ಲಿ ಕೊಡಲಾಗುವುದು ಎಂದು ಹೇಳಿದರು. 

ಮುಂದಿನ ವರ್ಷದಿಂದ ಅಕಾಡೆಮಿಗಳಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಲಾಗುವುದು. ಜೊತೆಗೆ ಪ್ರಸ್ತುತ 12,527 ಹಿರಿಯ ಕಲಾವಿದರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರು. ಮಾಶಾಸವನ್ನು ಕೊಡಲಾಗುತ್ತಿದೆ. ಈ ಮೊತ್ತವನ್ನು ಮುಂದಿನ ವರ್ಷದಿಂದ ತಲಾ 3 ಸಾವಿರ ರು.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.

 ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಹಿಂದಿನ ಸರ್ಕಾರ ಕಲಾವಿದರು ಹಾಗೂ ಸಾಹಿತಿಗಳನ್ನು ಕಡೆಗಣಿಸಿತ್ತು. ಇದರಿಂದಾಗಿ ಮೂರು ವರ್ಷಗಳಿಂದ ವಿವಿಧ ವಾರ್ಷಿಕ ಪ್ರಶಸ್ತಿಗಳ ಪ್ರದಾನ ನಡೆದಿರಲಿಲ್ಲ. ಅಕಾಡೆಮಿಗಳಿಗೆ ಕಾರ್ಯಕಾರಿ ಸಮಿತಿಯನ್ನೂ ನೇಮಿಸಿರಲಿಲ್ಲ. ನಮ್ಮ ಸರ್ಕಾರವು ಈ ಕೊರತೆಯನ್ನು ನೀಗಿಸಿ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದೆ. ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿದೆ. ಹೆಚ್ಚಿನ ಅನುದಾನವನ್ನು ಕೂಡ ಕೊಟ್ಟಿದೆ. ಹಿರಿಯ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು. ಈ ವರ್ಷ ಇನ್ನಷ್ಟು ಮಂದಿಗೆ ನೀಡಲು ಕ್ರಮವಹಿಸಲಾಗಿದೆ ಎಂದರು.

 ಕರ್ನಾಟಕ ನಾಟಕ ಆಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಕನ್ನಡ ರಂಗಭೂಮಿಯು ಮೂರು ವರ್ಷಗಳಿಂದ ಸ್ತಬ್ಧವಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ಕಾರಕ್ಕೆ ಆದಾಯ ತರದಿದ್ದರೂ ಗೌರವ ತರುತ್ತಿದೆ. ಇದನ್ನು ಅರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಕಲೆ ಮತ್ತು ಸಾಹಿತ್ಯಕ್ಕೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಧರಣೀದೇವಿ ಮಾಲಗತ್ತಿ, ಕೇರಳದ ರಂಗಭೂಮಿ ಕಲಾವಿದ ಚಂದ್ರದಾಸನ್‌, ಮುಂಬೈ ರಂಗಭೂಮಿ ಕಲಾವಿದ ಗಣೇಶ್‌ ಯಾದವ್‌, ರಿಜಿಸ್ಟ್ರಾರ್‌ ನಿರ್ಮಲಾ ಮಠಪತಿ ಉಪಸ್ಥಿತರಿದ್ದರು.

ಜೀವಮಾನದ ಸಾಧನೆ ಪ್ರಶಸ್ತಿ

ಹಿರಿಯ ಕಲಾವಿದೆ, ವಿಧಾನ ಪರಿಷತ್ತು ಸದಸ್ಯೆ ಡಾ.ಉಮಾಶ್ರೀ, ಹಿರಿಯ ನಾಟಕಕಾರ ಪ್ರೊ.ಎಚ್.ಎಸ್.ಶಿವಪ್ರಕಾಶ್, ಹಿರಿಯ ರಂಗ ಕಲಾವಿದ, ನಿರ್ದೇಶಕ ಕೋಟಿಗಾನಲ್ಲಿ ರಾಮಯ್ಯ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಇದೇ ಸಂದರ್ಭದಲ್ಲಿ 90 ಕಲಾವಿದರಿಗೆ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.