ಲೋಕಸಭೆ ಜೊತೆಗೇ ಸುರಪುರ ವಿಧಾನಸಭೆ ಕ್ಷೇತ್ರ ಉಪ ಚುನಾವಣೆ ಘೋಷಣೆ

| Published : Mar 17 2024, 01:48 AM IST / Updated: Mar 17 2024, 12:00 PM IST

ಲೋಕಸಭೆ ಜೊತೆಗೇ ಸುರಪುರ ವಿಧಾನಸಭೆ ಕ್ಷೇತ್ರ ಉಪ ಚುನಾವಣೆ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೇ.7ರಂದು ನಡೆಯುವ 2ನೇ ಹಂತದಲ್ಲಿ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ

ಕನ್ನಡಪ್ರಭ ವಾರ್ತೆ ಯಾದಗಿರಿ

ದೇಶಾದ್ಯಂತ ಲೋಕಸಭೆ ಚುನಾವಣೆ ದಿನಾಂಕಗಳು ಘೋಷಣೆಯಾಗಿವೆ. ಮೇ.7ರಂದು ನಡೆಯುವ 2ನೇ ಹಂತದಲ್ಲಿ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಯಾದಗಿರಿ, ಸುರಪುರ ಹಾಗೂ ಶಹಾಪುರ ವಿಧಾನಸಭಾ ಮತಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದರೆ, ಗುರುಮಠಕಲ್‌ ಕ್ಷೇತ್ರ ಕಲಬುರಗಿ ಲೋಕಸಭಾ ವ್ಯಾಪ್ತಿಗೆ ಬರುತ್ತದೆ.

ಇನ್ನು, ಈ ಲೋಕಸಭೆ ಜೊತೆ ಜೊತೆಗೇ ಜಿಲ್ಲೆಯ ಸುರಪುರ ವಿಧಾನಸಭಾ ಮತಕ್ಷೇತ್ರದಲ್ಲೂ ಉಪ ಚುನಾವಣೆ ಘೋಷಣೆಯಾಗಿದೆ. ಈ ಕ್ಷೇತ್ರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್‌ ಅವರು ಇದೇ ಫೆ.25ರಂದು ನಿಧನರಾಗಿದ್ದರಿಂದ, ತೆರವಾಗಿರುವ ಸ್ಥಾನಕ್ಕೆ ಈ ಚುನಾವಣೆ. ಇದು ಇಲ್ಲಿಯ ಮೊದಲ ಉಪ ಚುನಾವಣೆ.

ನಾಲ್ಕು ಬಾರಿ (ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಜಾ ವೆಂಕಟಪ್ಪ ನಾಯಕ್‌ ಅವರು ತೀವ್ರ ಹೃದಯಾಘಾತದಿಂದ ಫೆ.25 ರಂದು ನಿಧನರಾಗಿದ್ದರು. 

2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸಮೀಪದ ಪ್ರತಿಸ್ಪರ್ಧಿ, ಮಾಜಿ ಸಚಿವ ಬಿಜೆಪಿಯ ನರಸಿಂಹ ನಾಯಕ್ (ರಾಜೂಗೌಡ) ವಿರುದ್ಧ ಸುಮಾರು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

5 ಸಾವಿರದಷ್ಟು ಮತದಾರರು ಹೆಚ್ಚು: ಸುರಪುರ ತಾಲೂಕಿನ 23 ಗ್ರಾಮ ಪಂಚಾಯ್ತಿಗಳ 104 ಗ್ರಾಮಗಳು ಹಾಗೂ ಹುಣಸಗಿ ತಾಲೂಕಿನ18 ಗ್ರಾಮ ಪಂಚಾಯ್ತಿಗಳ 82 ಗ್ರಾಮಗಳು ಸೇರಿ ಸುರಪುರ ವಿಧಾನಸಭಾ ಕ್ಷೇತ್ರವಾಗಿದೆ.

2023 ರ ವಿಧಾನಸಭೆ ಚುನಾವಣೆಯಲ್ಲಿ ಸುರಪುರ ಕ್ಷೇತ್ರದಲ್ಲಿ ಪುರುಷರು 1,39,039, ಮಹಿಳೆಯರು 1,36, 359 ಹಾಗೂ ಇತರರು 21 ಸೇರಿ ಒಟ್ಟು 2,75,419 ಮತದಾರರಿದ್ದರು. 

ಶೇ.75.16 ರಷ್ಟು ಮತದಾನ ಆಗಿತ್ತು. ಈಗ ಮೇ.7ರಂದು ನಡೆಯುವ ಉಪ ಚುನಾವಣೆಯಲ್ಲಿ ಒಟ್ಟು 2,81,116 ಮತದಾರರಿದ್ದಾರೆ. ಅಂದರೆ, ಕಳೆದ 9 ತಿಂಗಳ ಅವಧಿಯಲ್ಲಿ 5697 ಮತದಾರರು ಹೆಚ್ಚಾಗಿದ್ದಾರೆ.

ಎಲ್ಲರಿಗಿಂತ ಮೊದಲು ಕನ್ನಡಪ್ರಭದಲ್ಲಿ: ಸುರಪುರ ವಿಧಾನಸಭೆ ಉಪ ಚುನಾವಣೆಯು ಲೋಕಸಭೆ ಚುನಾವಣೆಯ ವೇಳೆ ನಡೆಯುವ ಬಹುತೇಕ ಸಾಧ್ಯತೆಗಳು ಹೆಚ್ಚಿವೆ ಎಂದು ಕನ್ನಡಪ್ರಭ ಮಾ.6ರಂದು ವರದಿ ಪ್ರಕಟಿಸಿತ್ತು.

"ಲೋಕಸಭೆ ಜೊತೆಗೇ ಸುರಪುರ ವಿಧಾನಸಭೆಗೆ ಉಪ ಚುನಾವಣೆ " ಶೀರ್ಷಿಕೆಯಡಿ ಮಾ.6ರಂದು "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡ ವರದಿ ಈ ಕುರಿತು ಸೂಚ್ಯ ನೀಡಿದಂತ್ತಿತ್ತು. 

ಈ ಹಿಂದಿನಂತೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ನಡುವೆ ಮತ್ತೇ ಬಿರುಸಿನ ಸ್ಪರ್ಧೆ ನಡೆಯಬಹುದಾದ ಕುರಿತು ರಾಜಕೀಯ ಲೆಕ್ಕಾಚಾರಗಳಿವೆ.