ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಷೇರುದಾರರ ಒತ್ತಾಯದ ಮೇರೆಗೆ ಮರಣ ನಿಧಿ ಸ್ಥಾಪನೆಗಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ೫೦ ಲಕ್ಷ ರುಪಾಯಿಗಳನ್ನು ಮೀಸಲಿಟ್ಟು, ಸಕ್ಕರೆ ನಿರ್ದೇಶನಾಲಯ ಮತ್ತು ಆಡಳಿತ ಮಂಡಳಿಯೊಂದಿಗೆ ಕೂಲಂಕಷವಾಗಿ ಚರ್ಚಿಸಿ ಗಮನಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಬುಧವಾರ ತಾಲೂಕಿನ ಶ್ರೀನಿವಾಸಪುರದಲ್ಲಿನ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ೨೦೨೩-೨೪ನೇ ಸಾಲಿಗೆ ನಡೆಸಲಾದ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರ ಪ್ರಶ್ನೆಗಳಿಗೆ, ಮತ್ತು ಬೇಡಿಕೆಗಳಿಗೆ ಉತ್ತರಿಸಿದ ಅವರು, ಈಗಾಗಲೇ ಡಿಸಿಸಿ ಬ್ಯಾಂಕ್‌ನಲ್ಲಿ ಮರಣ ನಿಧಿ ಸ್ಥಾಪನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಮರಣ ನಿಧಿ ಸ್ಥಾಪನೆಗೆ ಆಗ್ರಹ ಕೇಳಿಬಂದಿದೆ. ೩೨ ಸಾವಿರ ಷೇರುದಾರರಿದ್ದು, ಅವರಿಗೆ ಗೌರವ ಕೊಡುವ ರೀತಿಯಲ್ಲಿ ಮರಣ ನಿಧಿ ನೀಡುವಂತಾಗಬೇಕಾಗಿರುವುದರಿಂದ ಈ ಕುರಿತು ಸಮಗ್ರವಾಗಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದೆಂದರು.ಸಹಮತ: ಇನ್ನೂ ಹೊಸ ಷೇರುದಾರರು ಸೇರಿ ಎಲ್ಲ ಷೇರುದಾರರಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿ ಕೇಳಿಬಂದ ಹಿನ್ನೆಲೆಯಲ್ಲಿ ಇದಕ್ಕೆ ನಮ್ಮ ಆಡಳಿತ ಮಂಡಳಿಯ ಸಹಮತವಿದೆ, ಇದರ ಕುರಿತಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣನವರೇ ಕ್ರಮಕ್ಕೆ ಮುಂದಾಗಬೇಕು. ಎಲ್ಲರಿಗೂ ಮತದಾನದ ಹಕ್ಕು ಸಿಗಬೇಕೆಂದು ಸಹಕಾರ ಇಲಾಖೆಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ೧೦೦ ಮಂದಿ ಆಯ್ದ ಷೇರುದಾರರು ಹಾಗೂ ಆಡಳಿತ ಮಂಡಳಿ ಸದಸ್ಯರ ನಿಯೋಗ ತೆರಳಿ ಈ ಕುರಿತಾಗಿ ಸಚಿವ ರಾಜಣ್ಣನವರಿಗೆ ಮನವಿ ಮಾಡೋಣವೆಂದರು.ಕಾರ್ಖಾನೆಯು ಹೌಸಿಂಗ್ ಬೋರ್ಡ್ ಬಡಾವಣೆ ಬಳಿ ಹೊಂದಿರುವ ೧೭.೧೦ ಎಕರೆ ಜಾಗವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಸುತ್ತಲ್ಲೂ ಕಾಂಪೌಂಡ್ ನಿರ್ಮಿಸುವ ಗುರಿ ಹೊಂದಿತ್ತಾದರೂ, ಚುನಾವಣೆ ವಿಷಯವಾಗಿ ಕೋರ್ಟ್‌ನಲ್ಲಿ ಪ್ರಕರಣವಿರುವುದರಿಂದ ಯಾವುದೇ ಅರ್ಥಿಕ ವಹಿವಾಟು ನಡೆಸದಂತೆ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಕಾಂಪೌಂಡ್ ನಿರ್ಮಾಣವಾಗಿಲ್ಲ, ಮುಂದಿನ ಆಡಳಿತ ಮಂಡಳಿಯು ರಚನೆಯಾದಾಗ ಈ ಕೆಲಸವಾಗಲಿದೆ ಎಂದರು. ಚಾಮುಂಡೇಶ್ವರಿ ಶುಗರ್ಸ್‌ನವರು ನೀಡಬೇಕಾಗಿರುವ ಲೀಸ್ ಮೊತ್ತದ ಪೈಕಿ ೧೩ ಕೋಟಿ ರು. ಬಾಕಿಯಿದೆ, ೩೩ ಕೋಟಿ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಇದೀಗ ೪.೫ ಕೋಟಿ ರು. ಮೊತ್ತದ ಚೆಕ್ ನೀಡಿದ್ದಾರೆ. ಬಾಕಿ ಉಳಿಸಿಕೊಂಡಿರುವ ಹಣಕ್ಕೆ ಬಡ್ಡಿ ಸೇರಿಸಿ ನೀಡುವಂತೆ ಸೂಚಿಸಲಾಗಿದೆ ಎಂದರು.ಸಭೆಯ ಆರಂಭದಲ್ಲಿ ೨೦೨೨-೨೩ನೇ ಸಾಲಿನ ಆಡಿಟ್ ವರದಿ, ಮಂಡಿಸುವ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು, ಷೇರುದಾರರು ಖರ್ಚಿನ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರ ಸಿಟ್ಟಿಂಗ್ ಚಾರ್ಜ್ ಕಳೆದ ಬಾರಿ ೧ ಲಕ್ಷ ಇದ್ದು, ಈ ಬಾರಿ ೭ ಲಕ್ಷ ದಾಖಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಬಿ.ಜೆ.ಕೃಷ್ಣೇಗೌಡ, ನಿರ್ದೇಶಕರಾದ ಎನ್.ಸಿ.ನಾರಾಯಣಗೌಡ, ಬಿ.ಸಿ.ಮಂಜುನಾಥ್, ಬಿ.ಎಲ್.ತೇಜಸ್ವಿಕಿರಣ್, ಕೆ.ಎಂ.ಜಯರಾಂ, ಎಚ್.ಎನ್.ದೇವೆಗೌಡ, ಕೆ.ಟಿ.ಯೋಗಾ ನಂಜುಂಡ, ಎಸ್.ಕೆ.ಶಿವಣ್ಣ, ಸಿ.ಸಿ.ರವೀಶ್ , ಮುತ್ತಿಗೆ ನಾರಾಯಣಗೌಡ, ವಿ.ಕೆ.ನಾರಾಯಣ, ಸೇರಿ ಇತರೆ ನಿರ್ದೇಶಕರು ಮತ್ತು ಎಂ.ಡಿ. ಆರ್.ಜೆ.ಕಾಂತರಾಜು ಇದ್ದರು.* ಬಾಕ್ಸ್‌ನ್ಯೂಸ್: ೪ ಕೋಟಿ ರು. ಅವ್ಯವಹಾರ ಆರೋಪಸಾಸಲಪುರದ ಜಗದೀಶ್ ಎಂಬುವರು ಚಾಮುಂಡೇಶ್ವರಿಯವರ ಲೀಸ್ ಹಣದ ಪೈಕಿ ೪ ಕೋಟಿ ಅವ್ಯವಹಾರವಾಗಿದೆ ಎಂದು ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ.ಎನ್.ಬಾಲಕೃಷ್ಣವರು, ಅವರು ೪ ಕೋಟಿ ಚೆಕ್ ನೀಡಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ನೀಡಿರುವ ಚೆಕ್ ಹಣ ಸಂದಾಯವಾಗಿರುವುದು ವಿಳಂಬವಾಗಿತ್ತೆ ವಿನಃ ಅಕ್ರಮವಾಗಿಲ್ಲ, ಎಂದಾಗ ಒಪ್ಪದಿದ್ದ ಕಾಂಗ್ರೆಸಿಗರ ನಡೆಗೆ ಶಾಸಕರು ಗರಂ ಆಗಿ ಮುಂದಿನ ವಾರ ನೀವುಗಳು ಬನ್ನಿ, ಆಡಿಟರ್ ಕರೆಸೋಣ ಮಾಹಿತಿ ಪಡೆಯಿರಿ ಎಂದರು. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆದು ಕೂಗಾಟಗಳಾದವು, ಪೊಲೀಸರ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಯಾಗಿಸಿದರು.