ಸಾರಾಂಶ
ನಿವೃತ್ತಿಯ ನಂತರವೂ ದೈಹಿಕ ಚಟುವಟಿಕೆಗಳನ್ನು ಮಾಡಿಕೊಂಡು ಸಧೃಡ ಆರೋಗ್ಯವನ್ನು ಕಾಯ್ದುಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರಿ ನೌಕರರಿಗೆ ವೃತ್ತಿಯಿಂದ ಮಾತ್ರ ನಿವೃತ್ತಿ ಆಗುತ್ತದೆ ಹೊರತು ಜ್ಞಾನ ಮತ್ತು ಅನುಭವಕ್ಕೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿಗಳ ಸಂಘದ 2023- 24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತ ಸರ್ಕಾರಿ ನೌಕರರು ಎಂದರೆ ಹಲವಾರು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅನುಭವಿಗಳು. ನಿವೃತ್ತರ ಅನುಭವಗಳು ಇವತ್ತಿನ ನೌಕರರ ಕೆಲಸ ಕಾರ್ಯಗಳಿಗೆ ತಳಹದಿಯಾಗುತ್ತದೆ ಎಂದರು.
ತಮ್ಮ ವೃತ್ತಿಯುದ್ದಕ್ಕೂ ಇಡೀ ರಾಜ್ಯದ ಉದ್ದಗಲಕ್ಕೂ ವಿವಿಧ ಇಲಾಖೆಗಳಲ್ಲಿ ವಿವಿಧ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿರುತ್ತಾರೆ. ಸಾಕಷ್ಟು ಅನುಭವ ಮತ್ತು ಅರಿವು ಸಂಪಾದಿಸಿರುತ್ತಾರೆ. ನಿವೃತ್ತರ ಸೇವೆ ಒಂದಲ್ಲ ಒಂದು ರೀತಿ ಸಮಾಜಕ್ಕೆ ಸಿಗುತ್ತಿರುತ್ತದೆ. ನಿವೃತ್ತಿಯ ನಂತರವೂ ದೈಹಿಕ ಚಟುವಟಿಕೆಗಳನ್ನು ಮಾಡಿಕೊಂಡು ಸಧೃಡ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು, ವಿಶ್ರಾಂತ ಉದ್ಯೋಗಿಗಳ ಸಂಘದ ಅಧ್ಯಕ್ಷ ಬಿ.ಆರ್. ಉಮಾಕಾಂತ್, ತಾಲೂಕು ಅಧ್ಯಕ್ಷರಾದ ಸಣ್ಣಲಿಂಗಪ್ಪ, ಬಾಲಕೃಷ್ಣ, ಜೋಸೆಫ್ ಆರೋಕ್ಯ, ಎಂ. ಮಹದೇವಯ್ಯ, ಶಿವನಂಜೇಗೌಡ, ಗೋವಿಂದೇಗೌಡ, ಪ್ರಧಾನ ಕಾರ್ಯದರ್ಶಿ ಚಿಕ್ಕಲಿಂಗಸ್ವಾಮಿ, ಖಜಾಂಚಿ ಬಿ.ಕೆ. ಶಿವಾನಂದ, ಉಪಾಧ್ಯಕ್ಷರಾದ ಮರಿಯಾದಾಸ್, ಕೆ.ಎಂ. ನಾಗರಾಜು, ಕೆ.ಟಿ. ವೀರಪ್ಪ, ಕೆ.ಎಂ. ಪುಟ್ಟು ಇದ್ದರು. ನಾಗಮ್ಮ ಪ್ರಾರ್ಥಿಸಿದರು. ಶ್ರೀಕಂಠೇಶ್ ನಿರೂಪಿಸಿದರು.