ಸಾರಾಂಶ
ಕೋಟದ ಮಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನಗಳ ಜಾತ್ರೋತ್ಸವ ಏ. 20ರಿಂದ ನಡೆಯಲಿದೆ. 25ರಂದು ಸಂಪ್ರೋಕ್ಷಣೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಕಾರಣಿಕ ಕ್ಷೇತ್ರಗಳಲ್ಲೊಂದಾದ ಕೋಟದ ಮಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನಗಳ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಎ.20ರಿಂದ ಮೊದಲ್ಗೊಂಡು 25 ರತನಕ ನಡೆಯಲಿದೆ.ಇಂದಿನಿಂದ ದೇವಳದ ತಂತ್ರಿಗಳಾದ ಪವಿತ್ರಪಾಣಿ ಗಣೇಶ ಐತಾಳ ಪಾರಂಪಳ್ಳಿ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ರಾಮಪ್ರಸಾದ ಆಡಿಗ ಗರಿಕೆಮಠ ಇವರ ಪೌರೋಹಿತ್ಯದಲ್ಲಿ ಸಕಲ ಧಾರ್ಮಿಕ ವಿಧಿ, ಹೋಮಾದಿ ಅನುಷ್ಠಾನಗಳು ನಡೆಯಲಿವೆ.
23ರಂದು ಪೂರ್ವಾಹ್ನ 11.55 ಕ್ಕೆ ರಥಾರೋಹಣ, ಅಪರಾಹ್ನ 12.30ಕ್ಕೆ ಮಹಾಅನ್ನಸಂತರ್ಪಣೆ, ಸಂಜೆ ರಥೋತ್ಸವ ನಡೆಯಲಿದೆ. ಕೊಂಬು ಕಹಳೆ, ಡೊಳ್ಳು ಕುಣಿತ, ಕೀಲು ಕುದುರೆ, ಚಂಡೆ ವಾದನ, ಬ್ಯಾಂಡ್ ಸೆಟ್, ಸಿಡಿಮದ್ದು ಪ್ರದರ್ಶನ ಈ ಜಾತ್ರೆಯ ವಿಶೇಷ ಆಕರ್ಷಣೆಗಳಾಗಿವೆ.24ರಂದು ಚೂರ್ಣೋತ್ಸವ, ಧ್ವಜಾವರೋಹಣ, ಮಹಾಮಂಗಳಾರತಿ, ಪ್ರಸಾದ ವಿತರಣೆ, 25ರ ಗುರುವಾರ ಸಂಪ್ರೋಕ್ಷಣೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಜಾತ್ರೋತ್ಸವದ ಅಂಗವಾಗಿ ಪ್ರತಿದಿನ ಯಕ್ಷಗಾನ, ನಾಟಕ, ಶಾಸ್ತ್ರೀಯ ಸಂಗೀತ, ನೃತ್ಯವೈಭವ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಇತ್ಯಾದಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ದೇಗುಲದ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.