ಸಾರಾಂಶ
ಕನಕಪುರ: ಸದಸ್ಯರ ನಂಬಿಕೆ, ಸಹಕಾರದಿಂದ ಒಂದು ಸಂಸ್ಥೆ ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯ ಎಂದು ಕ್ಯಾಪಿಟಲ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಆರ್.ಎಂ.ಗುರುಸ್ವಾಮಿ ತಿಳಿಸಿದರು. ನಗರದಲ್ಲಿ ಸಂಘದ 6ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಂಘ ಕಳೆದ ಆರು ವರ್ಷಗಳ ಹಿಂದೆ ಆರಂಭಗೊಂಡು ಇದುವರೆಗೂ ಉತ್ತಮ ವಹಿವಾಟು ನಡೆಸಿಕೊಂಡು ಬರತ್ತಿದೆ. ಇದಕ್ಕೆಲ್ಲಾ ಸದಸ್ಯರ ನಂಬಿಕೆಗೆ ಚ್ಯುತಿ ಬಾರದಂತೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ಸಹಕಾರವೇ ಕಾರಣ. ಸಂಘದ ಆದಾಯ ಹೆಚ್ಚಿಸಲು ಸದಸ್ಯರ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಯಶಸ್ವಿನಿ ಯೋಜನೆ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಸಂಘ ಲಾಭದ ಜೊತೆಗೆ ಸದಸ್ಯರ ಅನುಕೂಲಕ್ಕಾಗಿ 10ಸಾವಿರದಿಂದ 5 ಲಕ್ಷದವರೆಗೂ ವೈಯಕ್ತಿಕ ಸಾಲ, ವ್ಯಾಪಾರ ಸಾಲ ನೀಡುತ್ತಿದೆ. ಸದಸ್ಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಾವು ಬೆಳೆದು, ಸಂಸ್ಥೆಯನ್ನು ಬೆಳೆಸುವಂತೆ ಮನವಿ ಮಾಡಿ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ಸಂಘದ ಸಂಸ್ಥಾಪಕ ಅಧ್ಯಕ್ಷ ಮಾಲತೇಶ್ ಮಾತನಾಡಿ, ತಾಲೂಕಿನಲ್ಲಿ ಸಮಾನ ಮನಸ್ಕರು ಸೇರಿ ಜನತೆಗೆ ಉತ್ತಮ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಆರಂಭಿಸಿದಾಗ ಕೋವಿಡ್ ಸಂಕಷ್ಟ ಸಮಯ ಸೇರಿದಂತೆ ಹಲವು ವಿಘ್ನಗಳು ಬಂದರೂ ಸಹ ಸದಸ್ಯರ ಸಹಕಾರ ಹಾಗೂ ಆಡಳಿತ ಮಂಡಳಿಯ ಧೃಡ ಸಂಕಲ್ಪದಿಂದ ಉತ್ತಮ ವಹಿವಾಟಿನ ಜೊತೆಗೆ 687 ಸದಸ್ಯರನ್ನು ಸೇರಿಸಿ ಲಾಭದತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಾಗ ಮಾತ್ರ ಸಂಘ ಉಳಿದ ಸದಸ್ಯರಿಗೂ ಲಾಭ ಹಂಚಲು ಸಹಕಾರಿಯಾಗುತ್ತದೆ ಎಂದರು.
ಸಂಘದ ಸಿಇಒ ಲತಾ ಮಾತನಾಡಿ, 2024-25ನೇ ಸಾಲಿನ ವಾರ್ಷಿಕ ವರದಿ ಹಾಗೂ ಬಜೆಟ್ ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡರು. ಸಂಘದ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ನಿತ್ಯನಿಧಿ ಠೇವಣಿ ಸಂಗ್ರಹಕಾರರು ಹಾಗೂ ಎಸ್ಸೆಸ್ಸೆಲ್ಸಿ/ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಡಾ.ವಿಜಯಕುಮಾರ್ ಶಿರಹಟ್ಟಿ, ನಿರ್ದೇಶಕರಾದ ಎಂ.ರಾಜು, ಟಿ.ಎಸ್.ಮಹೇಶ್, ನಾಗೇಶ್, ಸುನೀಲ್ ಕುಮಾರ್,ನಾಗೇಶ್.ಆರ್, ವಿ.ರುದ್ರೇಶ್, ಶಿವಕುಮಾರ್ ನಾಯ್ಕ್, ಮನಸ್ವಿನಿ.ಜೆ, ಕಲ್ಪನಾ ಹಾಗೂ ಸಿಬ್ಬಂದಿ, ಸದಸ್ಯರು ಭಾಗವಹಿಸಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದ ಕ್ಯಾಪಿಟಲ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ 6ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷ ಆರ್.ಎಂ.ಗುರುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ಡಾ.ವಿಜಯಕುಮಾರ್ ಶಿರಹಟ್ಟಿ, ಸಂಘದ ಸಂಸ್ಥಾಪಕ ಅಧ್ಯಕ್ಷ ಮಾಲತೇಶ್, ಸದಸ್ಯರು ಪಾಲ್ಗೊಂಡಿದ್ದರು.