ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಪಾಠ ಅವಶ್ಯಕ

| Published : Jul 20 2024, 12:52 AM IST

ಸಾರಾಂಶ

ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮುಖ್ಯವಾಗಿ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸುವ ಮೂಲಕ ಯುವ ಪೀಳಿಗೆಯನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ನಿವೃತ್ತ ಡಿಡಿಪಿಐ ಎಂ.ಜಿ.ದಾಸರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮುಖ್ಯವಾಗಿ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸುವ ಮೂಲಕ ಯುವ ಪೀಳಿಗೆಯನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ನಿವೃತ್ತ ಡಿಡಿಪಿಐ ಎಂ.ಜಿ.ದಾಸರ ಹೇಳಿದರು.

ಮುಧೋಳ ಎಸ್.ಆರ್.ಕಂಠಿ ಕಾಲೇಜಿನ ಎನ್ಎಸ್ಎಸ್ ಘಟಕ 1 ಮತ್ತು 2ರ ಆಶ್ರಯದಲ್ಲಿ ತಾಲೂಕಿನ ಮುಗಳಖೋಡ ದತ್ತು ಗ್ರಾಮದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಸೇವಾ ಶಿಬಿರದ 5ನೇ ದಿನದ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ನೈತಿಕ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿ, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕುವುದೇ ನಿಜವಾದ ಸಂತೋಷ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವ ಜನಾಂಗ ಇಂದು ಪೋಷಕರನ್ನು ಗೌರವಿಸುವ ಗುಣವನ್ನು ರೂಡಿಸಿಕೊಳ್ಳಬೇಕಿದೆ. ಸ್ವಾರ್ಥ ಮನೋಭಾವ ಬಿಟ್ಟು ಇಡೀ ಸಮಾಜವೇ ನನ್ನದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ವ್ಯವಹಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೇ ಪಾರದರ್ಶಕವಾಗಿ ಬದುಕುವುದು, ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವಿಸುವುದು ಹೇಗೆ ಎಂಬುವುದನ್ನು ತಿಳಿಸಿಕೊಡಬೇಕಾಗಿದೆ ಎಂದರು.

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಬರೀ ಪಠ್ಯವನ್ನು ಬೋಧಿಸುವುದು ಮಾತ್ರವಲ್ಲದೇ, ಯೋಗ, ಧ್ಯಾನ, ಸಂಗೀತ ಮುಂತಾದ ಪಠ್ಯೇತರ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಉತ್ತಮ ಮಾರ್ಗದರ್ಶನ ಕಲ್ಪಿಸುವ ಅಗತ್ಯವಿದೆ ಎಂದರು.

ಇನ್ನೊರ್ವ ಅತಿಥಿ ಉಪನ್ಯಾಸ ಪ್ರೊ.ಎ.ಎಚ್.ಬರಗಿ ಮಾತನಾಡಿ, ನೀತಿಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ ವಿಜ್ಞಾನ ಬೇಕಿಲ್ಲ. ನೈತಿಕ ಮೌಲ್ಯಗಳು ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗುತ್ತಿದೆ. ತಳಪಾಯವಿಲ್ಲದ ಶಿಕ್ಷಣ ಪದ್ದತಿಯಾಗಿದೆ, ನೈತಿಕ ಮೌಲ್ಯ ಶಿಕ್ಷಣ ಪದ್ದತಿಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದರು.

ಮಕ್ಕಳ ಮನೋವಿಕಾಸಕ್ಕೆ ಆಧ್ಯಾತ್ಮಿಕ ಜ್ಞಾನ ಧ್ಯಾನ, ಕಲೆ, ಸಂಸ್ಕೃತಿ, ಅಜ್ಜಿ ಹೇಳುವ ಕತೆಗಳು ಇವೆಲ್ಲವು ಶಿಬಿರದಲ್ಲಿ ಮಕ್ಕಳಿಗೆ ಪ್ರಭಾವ ಬೀರಿದೆ. ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗಿವೆ. ಶಿಕ್ಷಕರ ಬೌದ್ಧಿಕ ಮಟ್ಟ, ಬೋಧಿಸುವ ವಿಷಯಗಳಲ್ಲಿ ಅವರು ತೋರುತ್ತಿರುವ ಆಸಕ್ತಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಮರ್ಪಣಾ ಮನೋಭಾವದಲ್ಲಿ ಕೊರತೆ ಇದೆ ಎಂದರು.

ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನಡೆದವು. ಡಾ.ಎಂ.ಆರ್.ಜರಕುಂಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಅನುಪಮ ಹೊಸಮನಿ ವರದಿವಾಚನ ಓದಿದರು. ಪ್ರೇಮಾ ಕರಿಗಾರ ಸ್ವಾಗತಿಸಿದರು. ಲಕ್ಷ್ಮೀಬಾಯಿ ಪಿಡ್ನಾಯಕ ವಂದಿಸಿದರು. ಲಕ್ಷ್ಮೀ ಬೂಸನ್ನವರ ನಿರೂಪಿಸಿದರು.