ಸಾರಾಂಶ
ಕಕ್ಕಬೆಯ ಪ್ರೌಢಶಾಲಾ ಆಟದ ಮೈದಾನದಲ್ಲಿ ಕೊಡಗು ಕಣಿಯ ವಿದ್ಯಾ ಅಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಣಿಯ ಜನಾಂಗದ ವಾರ್ಷಿಕ ಕ್ರೀಡಾಕೂಟವನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಜಿಲ್ಲೆಯ ವಿಶಿಷ್ಟ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರತಿಯೊಂದು ಜನಾಂಗದ ಪಾತ್ರ ಪ್ರಮುಖ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕನ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.ಇಲ್ಲಿಗೆ ಸಮೀಪದ ಕಕ್ಕಬೆಯ ಪ್ರೌಢಶಾಲಾ ಆಟದ ಮೈದಾನದಲ್ಲಿ ಕೊಡಗು ಕಣಿಯ ವಿದ್ಯಾ ಅಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಣಿಯ ಜನಾಂಗದ ವಾರ್ಷಿಕ ಕ್ರೀಡಾಕೂಟದ ಸಮಾರಂಭದಲ್ಲಿ ಅವರು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ವಿವಿಧ ಸಮುದಾಯಗಳ ಸಂಖ್ಯೆ ಕಡಿಮೆ ಇದ್ದರೂ ವಾರ್ಷಿಕ ಕ್ರೀಡಾಕೂಟ ಆಯೋಜಿಸುತ್ತಿರುವ ಮೂಲಕ ಸಂಘಟನೆ ಆಗುವುದು ಹೆಮ್ಮೆಯ ವಿಷಯ. ಜಿಲ್ಲೆಯ ಪ್ರತಿಯೊಂದು ಜನಾಂಗವೂ ತನ್ನದೇ ಆದ ಆಚಾರ-ವಿಚಾರ ಪದ್ಧತಿ ಪರಂಪರೆ ಹೊಂದಿದೆ. ಒಂದು ಜನಾಂಗವನ್ನು ಬಿಟ್ಟು ಜಿಲ್ಲೆ ಒಂದಾಗಲು ಸಾಧ್ಯವಿಲ್ಲ, ಎಲ್ಲರೂ ಒಟ್ಟಾದರೆ ಮಾತ್ರ ಜಿಲ್ಲೆಯ ಸಂಸ್ಕೃತಿ ಆಚಾರ ವಿಚಾರ ಬೆಳೆಯಲು ಸಾಧ್ಯ ಎಂದರು.ಅತಿಥಿಗಳಾಗಿ ಡಾ.ಮೇಚಿರ ಸುಭಾಷ್ ನಾಣಯ್ಯ , ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ಬುಡಕಟ್ಟು ಜನಾಂಗದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮತ್ತಿರರು ಪಾಲ್ಗೊಂಡಿದ್ದರು .
ಕಣಿಯ ವಿದ್ಯಾ ಅಭಿವೃದ್ಧಿ ಸಂಘದ ಅಧ್ಯಕ್ಷ ಚೆಂದುವಂಡ ದೇವಯ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಕಣಿಯರ ನಾಣಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.ಜನಾಂಗ ಬಾಂಧವರಿಗಾಗಿ ವಿವಿಧ ಕ್ರೀಡಾಕೂಟಗಳು ನಡೆದವು. ಮಕ್ಕಳು, ಮಹಿಳೆಯರು ಸೇರಿದಂತೆ ಕಣಿಯ ಜನಾಂಗದ ಹಲವು ಮಂದಿ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.