ರಾಜ್ಯದ ಹಲವೆಡೆ ಮುಂದುವರಿದ ವರ್ಷಧಾರೆ

| Published : May 22 2025, 01:10 AM IST

ಸಾರಾಂಶ

ರಾಜ್ಯದಲ್ಲಿ ಕೃತ್ತಿಕಾ ಮಳೆಯ ಅಬ್ಬರ ಮುಂದುವರಿದಿದ್ದು, ಬುಧವಾರವೂ ರಾಜ್ಯದ ಹಲವೆಡೆ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ 6 ಮನೆ, 1 ದನದ ಹಟ್ಟಿ, ಕೃಷಿ ತೋಟಗಳಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ರಾಜ್ಯದಲ್ಲಿ ಕೃತ್ತಿಕಾ ಮಳೆಯ ಅಬ್ಬರ ಮುಂದುವರಿದಿದ್ದು, ಬುಧವಾರವೂ ರಾಜ್ಯದ ಹಲವೆಡೆ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ 6 ಮನೆ, 1 ದನದ ಹಟ್ಟಿ, ಕೃಷಿ ತೋಟಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಮನೆಗಳು ಜಖಂಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬುಧವಾರ ಜಿಲ್ಲೆಯ ಅಂಗನವಾಡಿಗಳಿಗೆ ರಜೆ ನೀಡಲಾಗಿತ್ತು. ಗುಡ್ಡ ಕುಸಿತದಿಂದ ಮಿರ್ಜಾನ್- ಕತಗಾಲ (ಶಿರಸಿ-ಅಂಕೋಲಾ), ಕುಮಟಾ-ಶಿರಸಿ, ಕಾರವಾರ-ಶಿರಸಿ, ಮಾದನಗೇರಿ-ಗೋಕರ್ಣ, ಮಂಗಳೂರು-ಪಣಜಿ ಚತುಷ್ಪತ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಜೋಯಿಡಾದಲ್ಲಿ ಬೆಳಗಾವಿ-ಮಂಗಳೂರು ಬಸ್‌ ಅಣಶಿ ಮಾರ್ಗದಲ್ಲಿ ಗಟಾರಕ್ಕೆ ಜಾರಿ ಬಿದ್ದಿದ್ದು, ಅದೃಷ್ಟವಶಾತ್‌ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಭಾರೀ ಮಳೆಗೆ ಕಲಬುರಗಿ ಜಿಲ್ಲೆ ಅಫಜಲ್ಪುರ-ಮಣ್ಣೂರ ರಸ್ತೆ ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಕೋಲಾರ ಜಿಲ್ಲೆಯಾದ್ಯಂತ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಕೆಜಿಎಫ್‌ ತಾಲೂಕೊಂದರಲ್ಲೇ 73.06 ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಕೋಸು, ಬಾಳೆ, ಟೊಮೆಟೋ, ಮಾವು, ರಾಗಿ, ಪಪ್ಪಾಯಿ ಬೆಳೆಗಳು ನಾಶವಾಗಿವೆ. 35.96 ಲಕ್ಷ ರು.ಗೂ ಹೆಚ್ಚು ನಷ್ಟವಾಗಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಜಿ.ನಾಗಲಾಪುರ-ಬ್ಯಾಲಕುಂದಿ ನಡುವಿನ ಹಳ್ಳದಲ್ಲಿ ನೆರೆ ಬಂದಿದ್ದು, ಹಸುವೊಂದು ಕೊಚ್ಚಿಹೋಗಿದೆ. ಬೈಲುವದ್ದಗೇರಿ ಗ್ರಾಮದ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವಿದ್ಯುತ್‌ ಇಲಾಖೆಯ ಮಹೇಂದ್ರ ಗೂಡ್ಸ್‌ ವಾಹನ ತಡೆದು, ಸ್ಥಳೀಯರು ಅದರೊಳಗಿದ್ದ ಜನರ ಜೀವ ರಕ್ಷಿಸಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದಲ್ಲಿ ಕಪಿಲತೀರ್ಥ ಜಲಪಾತ ಧುಮ್ಮುಕ್ಕುತ್ತಿದ್ದು, ಪ್ರವಾಸಿಗರ ಮನ ಸೆಳೆಯುತ್ತಿದೆ. ಇದೇ ವೇಳೆ, ಕೊಡಗು, ಬೆಂಗಳೂರು, ಚಿಕ್ಕಮಗಳೂರು, ಧಾರವಾಡ, ಹಾವೇರಿ ಸೇರಿ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ. ಆಳೆತ್ತರ ಅಲೆಗಳ ನಡುವೆ ಸಿಲುಕಿದ ಬೋಟ್‌:

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದಾಗಿ ತೂಫಾನ್ ಉಂಟಾಗಿದ್ದು, ನಡುಗಡಲಲ್ಲಿ ಭಾರೀ ಗಾಳಿ ಬೀಸುತ್ತಿದೆ, ಆಳೆತ್ತರದ ಅಲೆಗಳು ಏಳುತ್ತಿವೆ, ಅವುಗಳ ಮಧ್ಯೆ ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರು ಮರಳಿ ದಡ ಸೇರುವುದಕ್ಕೆ ಹರಸಾಹಸ ಪಡುವ ವಿಡಿಯೋ ವೈರಲ್ ಆಗಿದೆ.