ಮತ್ತೊಂದು ಬಜೆಟ್ ಬಂದ್ರೂ ಬಿಡುಗಡೆಯಾಗದ ಘೋಷಿತ ಅನುದಾನ

| Published : Feb 01 2024, 02:00 AM IST

ಸಾರಾಂಶ

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಫೆ.1 ಮತ್ತೊಂದ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಮಧ್ಯ ಕರ್ನಾಟಕಕ್ಕೆ ಏನಾದರೂ ಕೊಡುಗೆ ಇರುತ್ತಾ ಎಂಬ ನಿರೀಕ್ಷೆ ಈ ಭಾಗದ ಜನರು ಇಟ್ಟುಕೊಂಡಿಲ್ಲ. ಕಳೆದ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾದ 5300 ಕೋಟಿ ರು. ಮೊತ್ತದಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಒಂದು ಪೈಸೆ ಬಿಡುಗಡೆಯಾಗಿಲ್ಲ. ಹಾಗಾಗಿ ಕೇಂದ್ರ ಬಜೆಟ್ ಬಗ್ಗೆ ಜನ ಆಸಕ್ತಿ ಕಳೆದುಕೊಂಡಿದ್ದಾರೆ.

ಚಿತ್ರದುರ್ಗ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಫೆ.1 ಮತ್ತೊಂದ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಮಧ್ಯ ಕರ್ನಾಟಕಕ್ಕೆ ಏನಾದರೂ ಕೊಡುಗೆ ಇರುತ್ತಾ ಎಂಬ ನಿರೀಕ್ಷೆ ಈ ಭಾಗದ ಜನರು ಇಟ್ಟುಕೊಂಡಿಲ್ಲ. ಕಳೆದ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾದ 5300 ಕೋಟಿ ರು. ಮೊತ್ತದಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಒಂದು ಪೈಸೆ ಬಿಡುಗಡೆಯಾಗಿಲ್ಲ. ಹಾಗಾಗಿ ಕೇಂದ್ರ ಬಜೆಟ್ ಬಗ್ಗೆ ಜನ ಆಸಕ್ತಿ ಕಳೆದುಕೊಂಡಿದ್ದಾರೆ.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅನುದಾನ ನೀಡುವಂತೆ ರಾಜ್ಯ ಸರ್ಕಾರದಿಂದ ಹೋದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು. ಈ ಸಂಬಂಧ ಬಜೆಟ್‌ನಲ್ಲಿ 5300 ಕೋಟಿ ರು. ಅನುದಾನ ಘೋಷಿಸಿತ್ತು. ಸಾಲದೆಂಬಂತ ಕಳೆದ ವಿಧಾನಸಭೆ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರು. ಅನುದಾನ ಒದಗಿಸುವುದಾಗಿ ಪುನರುಚ್ಚಾರ ಮಾಡಿದ್ದರು.

ಪ್ರಧಾನಿ ಸ್ವತಃ ಚಿತ್ರದುರ್ಗ ನೆಲದಲ್ಲಿ ನಿಂತು ಘೋಷಣೆ ಮಾಡಿದ್ದು, ಈ ಭಾಗದ ಜನರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಕಾಮಗಾರಿ ಬೇಗನೆ ಮುಗಿಯುತ್ತದೆ ಎಂದು ಭಾವಿಸಿದ್ದರು. ಆದರೆ ಒಂದು ವರ್ಷವಾದರೂ ಅನುದಾನ ಬಿಡುಗಡೆಯಾಗದೇ ಇರುವುದು ಕೇಂದ್ರ ಹುಸಿ ನುಡಿಯಿತಾ ಎಂಬ ಅನುಮಾನಗಳ ಮೂಡಿಸಿದೆ.

ನಂತರ ನಡೆದ ವಿದ್ಯಮಾನಗಳಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಬದಲಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಸರ್ಕಾರ ಪರಿಗಣಿಸುತ್ತದೆ ಎಂಬ ಜಲಶಕ್ತಿ ಸಚಿವಾಲಯದ ನಿರ್ದೇಶನ ರಾಜ್ಯ ಸರ್ಕಾರ ಪಾಲಿಸಿದೆ. ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ ಆಗ್ಜಿಲರೇಟೆಡ್ ಇರಿಗೇಷನ್ ಬೆನಿಫಿಟ್‌ ಪ್ರೋಗ್ರಾಮ್ (PMKSY-AIBP) ಅಡಿ ಅನುದಾನ ಒದಗಿಸುವ ಪ್ರಸ್ತಾವನೆ ಕೇಂದ್ರದ ಮುಂದೆ ಮಂಡಿಸಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ 2023 ಜು.3ರಂದು ಕೇಂದ್ರ ಜಲಶಕ್ತಿ ಸಚಿವ ಶೆಖಾವತ್ ಅವರಿಗೆ ಪತ್ರ ಬರೆದು ಪಿಎಂಕೆಎಸ್ ವೈ-ಎಐಬಿಪಿ ಯೋಜನೆಯಡಿ ಭದ್ರಾ ಮೇಲ್ದಂಡೆಗೆ ಅನುದಾನ ಒದಗಿಸುಂತೆ ಮನವಿ ಮಾಡಿಕೊಂಡಿದ್ದು, ಅದೂ ಕೂಡಾ ಈಡೇರಿಲ್ಲ.

ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ತುಮಕೂರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಭದ್ರಾ ಮೇಲ್ಡಂಡೆ ಕೆರೆಗಳ ತುಂಬಿಸುವ ಹಾಗೂ ತುಂತುರು ನೀರಾವರಿ ಅನುಷ್ಠಾನದ ಕಾಮಗಾರಿಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದಲ್ಲಿಇಬ್ಬರು ಸಚಿವರಿದ್ದಾರೆ. ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ, ಚಿತ್ರದುರ್ಗದಿಂದ ಎ.ನಾರಾಯಣಸ್ವಾಮಿ ಇದ್ದಾರೆ. ಕೇಂದ್ರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಬಹುದಿತ್ತೆಂಬ ಜನರ ಅಭಿಪ್ರಾಯಗಳಿಗೆ ಸದ್ಯಕ್ಕೆ ಸ್ಪಷ್ಟತೆಗಳು ಲಭ್ಯವಾಗಿಲ್ಲ.