ಸಾರಾಂಶ
ಸಿಎಂ ಮೇಲೆ ₹500 ಕೋಟಿ ಗಣಿ ಕಿಕ್‌ಬ್ಯಾಕ್ ದೂರು
ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮನವಿ ಸಲ್ಲಿಕೆ==
ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪ್ರಯತ್ನ: ಸಿಎಂಗಣಿ ಗುತ್ತಿಗೆ ನವೀಕರಣ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪ್ರಯತ್ನ ನಡೆಸಲಾಗಿದೆ. ಇಂಥ ಅಪಪ್ರಚಾರ ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ.ಸಿದ್ದರಾಮಯ್ಯ, ಮುಖ್ಯಮಂತ್ರಿ
==ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಎಂಟು ಕಂಪೆನಿಗಳ ಗಣಿ ಗುತ್ತಿಗೆ ನವೀಕರಣಕ್ಕೆ ಅನುಮೋದನೆ ನೀಡಿ 500 ಕೋಟಿ ರು. ಕಿಕ್ ಬ್ಯಾಕ್ ಪಡೆದಿದ್ದು, ರಾಜ್ಯದ ಬೊಕ್ಕಸಕ್ಕೆ 6,000 ಕೋಟಿ ರು. ನಷ್ಟ ಉಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ದೂರು ಸಲ್ಲಿಕೆಯಾಗಿದೆ.ಎಚ್.ರಾಮಮೂರ್ತಿ ಎಂಬ ವ್ಯಕ್ತಿ ಖುದ್ದು ಭೇಟಿ ನೀಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಎಂಟು ಕಂಪೆನಿಗಳ ಗಣಿ ಗುತ್ತಿಗೆಯನ್ನು ಹರಾಜು ಮೂಲಕ ನೀಡದೆ ಅಕ್ರಮವಾಗಿ ನವೀಕರಣ ಮಾಡಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಾಗಿದ್ದ ಆದಾಯ ಖೋತಾ ಆಗಿದೆ.
ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿ ಸೆಕ್ಷನ್ 7, 9,11,12 ಮತ್ತು 15, ಭಾರತೀಯ ನ್ಯಾಯಸಂಹಿತೆ ಅಡಿಯ ಸೆಕ್ಷನ್‌ಗಳಾದ 59, 61,42, 201, 227,228, 229, 239, 314, 316 ಸೇರಿ ವಿವಿಧ ನಿಯಮಗಳಡಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ದೂರುದಾರರು ಕೋರಿದ್ದಾರೆ.ಈ ಹಿಂದೆ ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಆದರೆ ಆರೋಪಗಳಲ್ಲಿ ಹುರುಳಿಲ್ಲ ಎಂಬ ಕಾರಣ ನೀಡಿ ಲೋಕಾಯುಕ್ತ ಸಂಸ್ಥೆ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಇದೀಗ ಇದೇ ಪ್ರಕರಣದ ಬಗ್ಗೆ ದೂರು ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಗಣಿ ನವೀಕರಣ ಕುರಿತು ದೂರು ಏನು?:ಗಣಿ ಗುತ್ತಿಗೆಗಳ ನವೀಕರಣ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಆರೋಪಿಸಿರುವ ದೂರುದಾರ, ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 10ಎ, 10ಎ (2) ಬಿ ಉಲ್ಲಂಘನೆಯಾಗಿದೆ. ತುಮಕೂರು ಮಿನರಲ್ಸ್, ವೆಸ್ಕೋ, ರಾಮಗಡ್, ಕೆಎಂಎಂಎಐ, ಎಂಇಎಲ್, ಎಂ. ಉಪೇಂದ್ರನ್ ಮೈನ್ಸ್, ಜಯರಾಮ್ ಮಿನರಲ್ಸ್ ಸೇರಿ ಎಂಟು ಗುತ್ತಿಗೆಗಳಲ್ಲಿ ಐದು ಗುತ್ತಿಗೆಗಳು ಎಂಎಂಡಿಆರ್ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆ ಬರುವ ದಿನದಂದೇ (2015ರ ಜ.12) ನವೀಕರಣ ಮಾಡಲಾಗಿತ್ತು ಎಂದೆಲ್ಲ ಆರೋಪಿಸಲಾಗಿದೆ.
ಈ ಹಿಂದೆ ಮುಡಾ ಪ್ರಕರಣದಲ್ಲೂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಕೆಯಾಗಿತ್ತು.==
ಹುರುಳಿಲ್ಲದ ವಿಷಯಕ್ಕೆ ವಿಷತುಂಬುವ ಪ್ರಯತ್ನ: ಸಿಎಂ
ಗಣಿ ಗುತ್ತಿಗೆ ನವೀಕರಣ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪ್ರಯತ್ನ ನಡೆಸಲಾಗಿದೆ. ಇಂಥ ಅಪಪ್ರಚಾರ ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲ ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸ ನಿರಂತರವಾಗಿ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, 2015 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಎಂಎಂಡಿಆರ್-1957 ಕಾಯ್ದೆಯಲ್ಲಿ ನವೀಕರಣವು 20 ವರ್ಷಗಳ ಅವಧಿಗೆ ಅನ್ವಯವಾಗುತ್ತಿತ್ತು. ಅದರ ಪ್ರಕಾರ ಸರ್ಕಾರ ಗಣಿ ಗುತ್ತಿಗೆ ನವೀಕರಣಕ್ಕೆ ಫಾರೆಸ್ಟ್ ಕ್ಲಿಯರೆನ್ಸ್ ಅನ್ನು ಪಡೆದುಕೊಳ್ಳುವ ಸಲುವಾಗಿ ಮಾತ್ರ ಷರತ್ತುಬದ್ಧ ತಾತ್ವಿಕ ಅನುಮೋದನೆ ನೀಡಿತ್ತು.
2015ರ ಜ.12 ರಂದು ಕೇಂದ್ರ ಸರ್ಕಾರ ಎಂಎಂಡಿಆರ್ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ಕಾರಣ ವಿವಿಧ ಹಂತದ ಪರಿಶೀಲನೆಗಳನ್ನು ನಡೆಸಿ, 2015ರ ಫೆ.9 ಗಣಿ ಗುತ್ತಿಗೆ ನವೀಕರಣಕ್ಕಾಗಿ ಷರತ್ತುಬದ್ಧವಾಗಿ ನೀಡಿದ್ದ 8 ಕಂಪನಿಗಳ ತಾತ್ವಿಕ ಅನುಮತಿ ಪತ್ರಗಳು ಊರ್ಜಿತವಲ್ಲ ಎಂದು ತೀರ್ಮಾನಿಸಿ ಅವುಗಳನ್ನು ರದ್ದುಪಡಿಸಿ ತಿದ್ದುಪಡಿ ಕಾಯ್ದೆಯಂತೆ ಕ್ರಮವಹಿಸಲು ಸೂಚಿಸಲಾಯಿತು.ಬಳಿಕ ಡೀಮ್ಡ್ ಅವಧಿ ವಿಸ್ತರಣೆಗೆ ಸಲ್ಲಿಸಿದ ನಿಯಮಗಳ ಪ್ರಕಾರ ಸುಪ್ರೀಂ ಕೋರ್ಟ್ ಸೂಚನೆಯಂತೆ ಒಂದು ಕಂಪೆನಿ ಪ್ರಸ್ತಾವನೆ ರದ್ದುಪಡಿಸಲಾಯಿತು. ಉಳಿದ 7 ಪ್ರಕರಣಗಳಲ್ಲಿ 2 ಕಂಪನಿಗಳಿಗೆ ನಿಯಮಗಳ ಉಲ್ಲಂಘನೆ ಹಿನ್ನೆಲೆ ಗಣಿಗಾರಿಕೆ ಹಕ್ಕುಗಳನ್ನು ನೀಡಿರುವುದಿಲ್ಲ. ಉಳಿದ 5 ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಬಿಜೆಪಿ ಆಡಳಿತದ ಅವಧಿಯಲ್ಲಿ ಅಂದರೆ 2020 ಹಾಗೂ 2021ರಲ್ಲಿ ಗಣಿ ಗುತ್ತಿಗೆ ಹಕ್ಕು ನೀಡಲಾಗಿದೆ. ಉಳಿದ ಎರಡು ಪ್ರಕರಣಗಳನ್ನು 2016 ಮತ್ತು 2018ರಲ್ಲಿ ಪೂರಕ ಕರಾರು ಪತ್ರದ ಮುಖಾಂತರ ಷರತ್ತುಬದ್ಧ ಡೀಮ್ಡ್ ವಿಸ್ತರಣೆಯ ಗಣಿ ಗುತ್ತಿಗೆ ಹಕ್ಕು ನೀಡಲಾಗಿದೆ. ಹಾಗಾಗಿ, ಈ ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ನಷ್ಟವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಎಚ್.ಡಿ.ಕುಮಾರಸ್ವಾಮಿ ಅವರು 2018ರಲ್ಲೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದರು. ಹಿಂದೆಯೂ ವಿರೋಧ ಪಕ್ಷಗಳವರು, ಕೆಲ ವ್ಯಕ್ತಿಗಳು ಹಲವು ಸಂಸ್ಥೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿ ದೂರುಗಳನ್ನು ದಾಖಲಿಸಿದ್ದರು. ಇವುಗಳಲ್ಲಿ ಯಾವುದೇ ಹುರುಳಿಲ್ಲವೆಂದು ದೂರುಗಳನ್ನು ಮುಕ್ತಾಯಗೊಳಿಸಲಾಗಿತ್ತು. ಇದೀಗ ರಾಜಕೀಯಕ್ಕಾಗಿ ಹುರುಳಿಲ್ಲದ ವಿಷಯಕ್ಕೆ ವಿಷ ತುಂಬಿ ಜಗಿಯಲು ಹೊರಟಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ