ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಮತ್ತೆ ಅನಿಲ ಸೋರಿಕೆ ಭೀತಿ ಮೂಡಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಲ್ವಾರ್ಟ್ ಕಂಪನಿಯಿಂದ ಹೈಡ್ರೋ ಜನ್ ಗ್ಯಾಸ್ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿ, ಸ್ಥಳದಲ್ಲಿ ತುರ್ತು ಪರಿಶೀಲನೆ ಮತ್ತು ವೈಜ್ಞಾನಿಕ ಪರೀಕ್ಷೆ ನಡೆಸುವಂತೆ ನಮ್ಮ ಕರ್ನಾಟಕ ಸೇನೆ ಯಾದಗಿರಿ ತಾಲೂಕು ಘಟಕವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಮತ್ತೆ ಅನಿಲ ಸೋರಿಕೆ ಭೀತಿ ಮೂಡಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಲ್ವಾರ್ಟ್ ಕಂಪನಿಯಿಂದ ಹೈಡ್ರೋ ಜನ್ ಗ್ಯಾಸ್ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿ, ಸ್ಥಳದಲ್ಲಿ ತುರ್ತು ಪರಿಶೀಲನೆ ಮತ್ತು ವೈಜ್ಞಾನಿಕ ಪರೀಕ್ಷೆ ನಡೆಸುವಂತೆ ನಮ್ಮ ಕರ್ನಾಟಕ ಸೇನೆ ಯಾದಗಿರಿ ತಾಲೂಕು ಘಟಕವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಭಾನುವಾರ ಬೆಳಗಿನ ಜಾವದಲ್ಲಿ ನಡೆದಿದೆ ಎನ್ನಲಾದ ಗ್ಯಾಸ್ ಸೋರಿಕೆಯಿಂದಾಗಿ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಮತ್ತು ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ಯಾಸ್‌ನ ತೀವ್ರ ವಾಸನೆಯಿಂದ ಕಣ್ಣು, ಮೂಗು, ಗಂಟಲು ಉರಿ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತಿದೆ ಎಂದು ಕಾರ್ಮಿಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೈಡ್ರೊಜನ್ ಗ್ಯಾಸ್ ತೀವ್ರ ವಾಸನೆಯಿಂದ ಕೂಡಿದ್ದು, ಕಣ್ಣು, ಮೂಗು, ಗಂಟಲು ಮತ್ತು ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಡೇಚೂರು, ಬಾಡಿಯಾಳ, ಸೈದಾಪುರ, ಶೆಟ್ಟಿಹಳ್ಳಿ ಸಹಿತ 20-30 ಗ್ರಾಮಗಳಲ್ಲಿ ವಿಷಕಾರಿ ಗಾಳಿ, ತೀವ್ರ ದುರ್ವಾಸನೆಯಿಂದ ಅಸ್ತಮಾ, ಉಸಿರಾಟದ ತೊಂದರೆ, ಚರ್ಮರೋಗಗಳು ಹೆಚ್ಚಾಗುತ್ತಿವೆ ಜತೆಗೆ ಮೀನು, ಕಪ್ಪೆ, ಜಿಂಕೆ, ನವಿಲು ಸೇರಿದಂತೆ ಜಲಚರ-ಪಶುಪಕ್ಷಿಗಳು ಸಾವಿಗೀಡಾಗುತ್ತಿವೆ ಎಂಬ ಆತಂಕವೂ ವ್ಯಕ್ತವಾಗಿದೆ.

ನಮ್ಮ ಕರ್ನಾಟಕ ಸೇನೆ ಯಾದಗಿರಿ ತಾಲೂಕು ಅಧ್ಯಕ್ಷ ವೀರೇಶ್ ಸಜ್ಜನ್ ಕಡೇಚೂರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿ ಪತ್ರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಿಸಿದ ತಹಸೀಲ್ದಾರ್, ಪರಿಸರ ಅಧಿಕಾರಿ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಅಧಿಕಾರಿಗಳಿಗೆ 10 ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ.

ಸ್ಥಳದ ತಕ್ಷಣ ಪರಿಶೀಲನೆ, ಕೈಗಾರಿಕಾ ಘಟಕದ ಒಳಗೆ ಮತ್ತು ಸುತ್ತಮುತ್ತ ಗಾಳಿಯ ಗುಣಮಟ್ಟದ ವೈಜ್ಞಾನಿಕ ಪರೀಕ್ಷೆ, ಅಪಾಯಕಾರಿ ರಾಸಾಯನಿಕಗಳ ಪ್ರಮಾಣವನ್ನು ಅಧಿಕೃತ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ಬಹಿರಂಗಪಡಿಸುವುದು. ಪೈಪ್‌ಲೈನ್, ಟ್ಯಾಂಕ್, ವಾಲ್ವ್ ಸೇರಿದಂತೆ ಉಪಕರಣಗಳ ತಾಂತ್ರಿಕ ಪರಿಶೀಲನೆ, ಕಾರ್ಮಿಕರ ಸುರಕ್ಷತಾ ಸಾಧನ, ಮಾಸ್ಕ್, ತುರ್ತು ಚಿಕಿತ್ಸಾ ವ್ಯವಸ್ಥೆ ಪರಿಶೀಲನೆ, ಸೋರಿಕೆ ಕಂಡುಬಂದಲ್ಲಿ ತಕ್ಷಣ ನಿಯಂತ್ರಣ ಕ್ರಮ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸರ ಮತ್ತು ಆರೋಗ್ಯದ ಮೇಲಿನ ಪರಿಣಾಮದ ಅಧ್ಯಯನ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ, ಭವಿಷ್ಯದಲ್ಲಿ ಮರುಕಳಿಸದಂತೆ ತುರ್ತು ನಿರ್ವಹಣಾ ವ್ಯವಸ್ಥೆ, ಕಾರ್ಮಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆ ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ತುರ್ತು ಎಂದು ಪರಿಗಣಿಸಿ ಸಮಗ್ರ ತನಿಖೆ ನಡೆಸಿ, ಕೈಗೊಂಡ ಕ್ರಮಗಳ ಬಗ್ಗೆ ಲಿಖಿತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

* ದುರಂತಗಳ ಸರಮಾಲೆ: ಆಗಸ್ಟ್‌ನಲ್ಲಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಶಂಕಿತ ಸಲ್ಫರ್ ಡೈಆಕ್ಸೈಡ್ ಅನಿಲ ಸೋರಿಕೆಯಾಗಿ ತೆಲಂಗಾಣದ ಕಟ್ಲಾ ಗಣೇಶ್, ಮಧ್ಯಪ್ರದೇಶದ ವಿಕ್ರಂ ಸಿಂಗ್ ಗೊಂಡಾ ಮತ್ತು ಸಂಜಯ್ ಸಿಂಗ್ ಗೊಂಡಾ ಎಂಬ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಆಂಧ್ರದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ರಾಯಚೂರು ಆಸ್ಪತ್ರೆಗೆ ದಾಖಲಾಗಿದ್ದರು. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಎಸ್‌ಡಿಆರ್‌ಎಫ್, ಫೋರೆನ್ಸಿಕ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದವು.

ಭಾನುವಾರದ ಹೈಡ್ರೋಜನ್ ಗ್ಯಾಸ್ ಸೋರಿಕೆಯು ಸ್ಥಳೀಯರಲ್ಲಿ ಮತ್ತಷ್ಟೂ ಭಯ ಹುಟ್ಟಿಸಿದೆ. ಕಳೆದ 6-7 ವರ್ಷಗಳಿಂದ ಸಾವು-ನೋವುಗಳು ನಡೆಯುತ್ತಲೇ ಇವೆ. ಅಧಿಕಾರಿಗಳು ನಿರೀಕ್ಷಿತ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿದೆ. ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸಿ ವೈಜ್ಞಾನಿಕ ವರದಿ ಬಹಿರಂಗಪಡಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದರೆ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕೈಗಾರಿಕಾ ಪ್ರದೇಶದಲ್ಲಿನ ಈ ಘಟನೆಯ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆಯುತ್ತಿದೆ. ಪರಿಸರ ನಿಯಮಗಳ ಉಲ್ಲಂಘಿಸುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಜಿಲ್ಲಾಧಿಕಾರಿ ರಾಹುಲ್‌ ಪಾಂಡ್ವೆ ಹೇಳಿದರು.