ಸಾರಾಂಶ
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮಕ್ಕೆ ಮಾ.26ರಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳ ಜೊತೆ ತೆರಳಿ ಗ್ರಾಮಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದರು.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮಕ್ಕೆ ಮಾ.26ರಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳ ಜೊತೆ ತೆರಳಿ ಗ್ರಾಮಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ. ಗ್ರಾಮದಲ್ಲಿ ಹಿಂದಿನಿಂದಲೂ ಸಹ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಕಳೆದ ತಿಂಗಳು ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ ಬೇಕಾಗಿರುವ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದರು.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ ಜೊತೆಗೆ ಸಂಬಂಧಪಟ್ಟ ಗ್ರಾಪಂ ನಿವಾಸಿಗಳು ದೂರು ಸಲ್ಲಿಸಿದ್ದರೂ ಯುಗಾದಿ ಹಬ್ಬದ ಮುನ್ನ ನಾಲ್ಕು ದಿನ ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಇತ್ತ ಕಡೆ ಗಮನಹರಿಸಿರುವುದಿಲ್ಲ. ಹೀಗಾಗಿ ಜೀವ ಜಲ ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಸಾಕಷ್ಟು ತೊಂದರೆ ಉಂಟಾಗಿದೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ನೇರವಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ದೂರವಾಣಿ ಮುಖಾಂತರ ದೂರು ಸಲ್ಲಿಸಿದ್ದಾರೆ. ಆದರೆ, ಸಮಸ್ಯೆ ಬಗೆಹರಿದಿಲ್ಲ.ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು:
ಗ್ರಾಮದಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಮಳೆ ಇಲ್ಲದೆ ಕಂಗಲಾಗಿರುವ ಪ್ರಾಣಿಗಳಿಗೆ ಮೇವಿಲ್ಲ ಜೊತೆಗೆ ನೀರು ಸಹ ಇಲ್ಲ ಹೀಗಾಗಿ ಗ್ರಾಮದಲ್ಲಿ ಸಾಕಷ್ಟು ನೀರಿನ ಸಮಸ್ಯೆ ತಲೆದೂರಿರುವ ಬಗ್ಗೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸ್ವತಃ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರವನ್ನು ಮಾಡುವುದಾಗಿ ಗ್ರಾಮಸ್ಥರು ಮತ್ತೆ ಹೇಳಿಕೆ ನೀಡಿದ್ದಾರೆ.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಮೂರು ದಿನಗಳಿಗೊಮ್ಮೆ ಒಂದು ಟ್ಯಾಂಕರ್ ನೀರು ಬರುತ್ತಿದ್ದು ಅದು ಗ್ರಾಮಸ್ಥರಿಗೆ ಸಾಲುವುದಿಲ್ಲ. 250 ಮನೆಗಳಿರುವ ಗ್ರಾಮದಲ್ಲಿ 600 ಜನಸಂಖ್ಯೆ ಇದ್ದಾರೆ. ಕುಡಿಯಲು ಹಾಗೂ ಜನ ಜಾನುವಾರುಗಳಿಗೆ ನೀರು ಸಾಲುತ್ತಿಲ್ಲ. ಹೆಚ್ಚಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಜೊತೆಗೆ ಮೂಲಭೂತ ಸೌಲಭ್ಯಗಳಾದ ರಸ್ತೆ ಮತ್ತು ವಿದ್ಯುತ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿದ್ದಾಗ ತಿಳಿಸಿದ್ದೇವೆ. ಹೀಗಾಗಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಇರುವುದರಿಂದ ಮೂಲಭೂತ ಸೌಲಭ್ಯಗಳ ಬಗ್ಗೆ ಗ್ರಾಮದ ನಿವಾಸಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡದೆ ಮತ್ತೆ ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದರಿಂದ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮದ ಮುಖಂಡರಾದ ಮಾದ ತಂಬಡಿ ಮತ್ತು ರವಿ ತಿಳಿಸಿದ್ದಾರೆ.