ಬಿಆರ್‌ಟಿಯಲ್ಲಿ ಮತ್ತೊಂದು ಆನೆ ಸಾವು

| Published : Sep 17 2024, 12:48 AM IST

ಸಾರಾಂಶ

ಹನೂರಿನಲ್ಲಿ ಬೆಳಗ್ಗೆ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಬೈಲೂರು ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆ ಸಾವನಪ್ಪಿದ ಹಿನ್ನೆಲೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರುಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಜರುಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹುಲಿ ಸಂರಕ್ಷಿತ ಬೈಲೂರು ಅರಣ್ಯ ಪ್ರದೇಶದ ಪಿಜಿ ಪಾಳ್ಯ ಗಸ್ತಿನ ಮಾವತ್ತೂರು ಬಿದಿರುಕೆರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 50 ರಿಂದ 60 ವರ್ಷ ವಯಸ್ಸಿನ ಹೆಣ್ಣಾನೆ ಸ್ವಾಭಾವಿಕವಾಗಿ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

20 ದಿನದ ಅಂತರದಲ್ಲಿ ನಾಲ್ಕು ಅನೆಗಳ ಸಾವು: ಬೈಲೂರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯ ಒಂದರಲ್ಲಿಯೇ ಕಳೆದ 20 ದಿನಗಳಲ್ಲಿ ಎರಡು ಹೆಣ್ಣಾನೆ ಒಂದು ದಂತ ಇರುವ ಆನೆಯ ಕಳೆಬರಹ ಪತ್ತೆಯಾಗಿರುವುದು ಸೇರಿದಂತೆ ಬಿಆರ್ ಟಿ ಪ್ರದೇಶದಲ್ಲಿ ಒಟ್ಟು 4 ಆನೆ ಮೃತಪಟ್ಟಿದೆ.

ಕಳೆದ ಆಗಸ್ಟ್ 27ರಂದು ಬೈಲೂರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅಲದಕೆರೆ ಅರಣ್ಯ ಪ್ರದೇಶದಲ್ಲಿ ಎರಡು ದಂತ ಇರುವ ಕಾಡಾನೆ ಸಾವನ್ನಪ್ಪಿದ ಬಗ್ಗೆ ಕಳೆಬರಹ ಅರಣ್ಯ ಅಧಿಕಾರಿಗಳಿಗೆ ದೊರೆತಿತ್ತು. ಜೊತೆಗೆ, 30 ರಂದು ಬೈಲೂರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮಾವತ್ತೂರು ಬಿ ಗಸ್ತು ಧೂಪದ ಮರ ಒಡ್ಡು ಅರಣ್ಯ ಪ್ರದೇಶದಲ್ಲಿ ಒಂದು ಹೆಣ್ಣಾನೆ ಸಹ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಗಸ್ತಿನಲ್ಲಿದ್ದಾಗ ಅರಣ್ಯ ಪ್ರದೇಶದಲ್ಲಿ ಆನೆ ಸಾವನ್ನಪ್ಪಿರುವುದು ವರದಿಯಾಗಿತ್ತು.

20 ದಿನದ ಅಂತರದಲ್ಲಿಯೇ ಅರಣ್ಯ ಪ್ರದೇಶದಲ್ಲಿ ಮೂರು ಕಾಡಾನೆಗಳು ಸಾವನ್ನಪ್ಪಿರುವುದು ಆತಂಕಕಾರಿಯಾಗಿದೆ. ಘಟನಾ ಸ್ಥಳಕ್ಕೆ ಎಸಿಎಫ್ ಸುರೇಶ್ ವಲಯ ಅರಣ್ಯ ಅಧಿಕಾರಿ ಪ್ರಮೋದ್, ಪಶು ವೈದ್ಯಾಧಿಕಾರಿ, ವಾಸಿಮ್ ಮಿರ್ಜಾ ಭೇಟಿ ನೀಡಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.