ಬಿಆರ್‌ಟಿ ಹಿಲ್ಸ್‌ನಲ್ಲಿ ಮತ್ತೇ ಬೆಂಕಿ

| Published : Mar 10 2024, 01:36 AM IST

ಸಾರಾಂಶ

ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ಉಪವಿಭಾಗದ ಯಳಂದೂರು ವನ್ಯಜೀವಿ ವಲಯದ ಬಿಆರ್ ಹಿಲ್ಸ್ ಶಾಖೆಯ ಚಿಕ್ಕ ಮಲ್ಕಿ ಗಸ್ತಿನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು 25 ರಿಂದ 30 ಎಕರೆ ಅರಣ್ಯ ಪ್ರದೇಶದಲ್ಲಿ ನೆಲ ಬೆಂಕಿಯಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ಉಪವಿಭಾಗದ ಯಳಂದೂರು ವನ್ಯಜೀವಿ ವಲಯದ ಬಿಆರ್ ಹಿಲ್ಸ್ ಶಾಖೆಯ ಚಿಕ್ಕ ಮಲ್ಕಿ ಗಸ್ತಿನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು 25 ರಿಂದ 30 ಎಕರೆ ಅರಣ್ಯ ಪ್ರದೇಶದಲ್ಲಿ ನೆಲ ಬೆಂಕಿಯಾಗಿದೆ. ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ವನ್ಯಜೀವಿ ವಲಯದ ಚಿಕ್ಕಮಲ್ಕಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬ್ಬಂದಿ ಬೆಂಕಿಬಿದ್ದ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿರುತ್ತಿರುವಾಗ ಗಾಳಿ ರಭಸ ಹೆಚ್ಚಾಗಿ ಸುಮಾರು 25-30 ಎಕರೆ ಅರಣ್ಯ ಪ್ರದೇಶದಲ್ಲಿ ನೆಲಬೆಂಕಿಯಾಗಿರುವುದನ್ನು ಸಂಜೆ ವೇಳೆಗೆ ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಯಳಂದೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ:ಚಾಮರಾಜನಗರ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೆಂಕಿಯಿಂದ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಸತ್ಯಾಸತ್ಯತೆ ತಿಳಿದುಕೊಳ್ಳಲು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿರುವುದು ತಡವಾಗಿ ತಿಳಿದುಬಂದಿದೆ.

ಈ ಕುರಿತು ಫೆ.29ರಂದೇ ಅರಣ್ಯ ಸಚಿವ ಖಂಡ್ರೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಪತ್ರದಲ್ಲಿ ಬಿಆರ್‌ಟಿ ವೃತ್ತದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಕಡೆ ಅಂದರೆ ಬಿಳಿಗಿರಿರಂಗನಬೆಟ್ಟ, ಪುರಾಣಿಪೋಡು, ಮುತ್ತುಗದ ಪೋಡಿನಲ್ಲಿ ಕಾಳಿಚ್ಚಿಗೆ ಸುಮಾರು 200 ಎಕರೆ ಪ್ರದೇಶ ಸುಟ್ಟು ಹೋಗಿ ಅಪಾರ ಹಾನಿ ಆಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ತಲುಪಿದೆ ಎಂದಿದ್ದಾರೆ. ಆದರೆ, 10 ಎಕರೆ ಪ್ರದೇಶದಲ್ಲಿ ಮಾತ್ರವೇ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಸತ್ಯಾಸತ್ಯತೆ ತಿಳಿಯಲು ನೋಡಲ್ ಅಧಿಕಾರಿಯನ್ನು ಕಳುಹಿಸಿ, ತಪಾಸಣೆ ಮಾಡಿಸಿ, ಹಾನಿಯ ಪ್ರಮಾಣದ ಕುರಿತಂತೆ 4 ದಿನಗಳ ಒಳಗಾಗಿ ವರದಿಯನ್ನು ಕಡತದಲ್ಲಿ ಮಂಡಿಸಲು ಸೂಚಿಸಿರುವುದಾಗಿ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.