ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಪ್ರಕೃತಿ ಸೌಂದರ್ಯವನ್ನು ತನ್ನೊಡಳಲ್ಲಿ ಇಟ್ಟುಕೊಂಡಿರುವ ಕೊಡಗು ಜಿಲ್ಲೆ, ಪ್ರವಾಸಿಗರ ಪಾಲಿನ ಅಚ್ಚುಮೆಚ್ಚಿನ ತಾಣ. ಜಿಲ್ಲೆಯಲ್ಲಿ ಇದೀಗ ಎರಡನೇ ಗ್ಲಾಸ್ ಬ್ರಿಡ್ಜ್ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದ್ದು, ಪ್ರವಾಸಿಗರನ್ನು ಸೆಳೆಯಲು ಅಣಿಯಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಮೊಟ್ಟೆಯಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಗ್ಲಾಸ್ ಬ್ರಿಡ್ಜ್ ತಲೆ ಎತ್ತಿ ನಿಂತಿದೆ. ಖಾಸಗಿ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಬ್ರಿಡ್ಜ್ ಇದಾಗಿದ್ದು, 5ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದ್ದು, ಪ್ರವಾಸಿಗರಿಗೆ ಮುಕ್ತವಾಗಲಿದೆ.ಕೇರಳ ರಾಜ್ಯದ ವಯನಾಡು ಬಿಟ್ಟರೆ ಮಡಿಕೇರಿಯ ಉಡೋತ್ ಮೊಟ್ಟೆಯಲ್ಲಿ ಗ್ಲಾಸ್ ಬ್ರಿಡ್ಜ್ ಇದ್ದು, ಇದೀಗ ಅಬ್ಬಿಫಾಲ್ಸ್ ತೆರಳುವ ಸಮೀಪದಲ್ಲೇ ಮತ್ತೊಂದು ಗ್ಲಾಸ್ ಬ್ರಿಡ್ಜ್ ನಿರ್ಮಾಣಗೊಂಡಿದೆ. ಇದಕ್ಕೆ ಮಡಿಕೇರಿ ಸ್ಕೈ ವಾಕ್ ಗ್ಲಾಸ್ ಬ್ರಿಡ್ಜ್ ಎಂದು ಹೆಸರಿಡಲಾಗಿದೆ.
ಗ್ಲಾಸ್ ಬ್ರಿಡ್ಜ್ ಸುಮಾರು 250 ಅಡಿ ಎತ್ತರ, 180 ಉದ್ದ, ಹಾಗೂ 40 ಎಂ.ಎಂ ದಪ್ಪದ ಗಾಜುಗಳನ್ನು ಮೂರು ಪದರದಲ್ಲಿ ಅಳವಡಿಸಲಾಗಿದೆ. ಜೊತೆಗೆ 30 ಜನರು ಏಕ ಕಾಲದಲ್ಲಿ ನಡೆದಾಡಬಹುದಾಗಿದೆ ಹಾಗೂ 2 ಟನ್ ತೂಕದ ಸಾಮರ್ಥ್ಯವನ್ನು ಈ ಗ್ಲಾಸ್ ಬ್ರಿಡ್ಜ್ ಹೊಂದಿದೆ. ಎತ್ತರದಲ್ಲಿ ಮತ್ತೊಂದು ಪ್ಯಾಸೇಜ್ ನಿರ್ಮಿಸಿದ್ದು, ಜನುಮ ದಿನದ ಪಾರ್ಟಿಗಾಗಿಯೇ ಇದನ್ನು ವಿನ್ಯಾಸಗೊಳಿಸಲಾಗಿದೆ. ವೀಕ್ಷಣಾ ಸ್ಥಳದಲ್ಲಿ ನಿಂತು ವೀಕ್ಷಿಸಿದರೆ 360 ಡಿಗ್ರಿ ಕೋನದಿಂದ ಒಳ್ಳೆಯ ವೀಕ್ಷಣಾ ಅವಕಾಶವೂ ಇದೆ.ಪ್ರವಾಸಿಗರಿಗಾಗಿ ಸುಮಾರು 4 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ ಮಂಜು ಮುಸುಕಿದ ವಾತಾವರಣ ಕೂಡ ಇಲ್ಲಿ ಸುಂದರವಾಗಿರಲಿದೆ. ಅಲ್ಲದೆ ಸೂರ್ಯಾಸ್ತ ಕೂಡ ಪ್ರವಾಸಿಗರ ಮನ ಸೆಳೆಯಲಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಅಬ್ಬಿಜಲಪಾತ ಹಾಗೂ ಮಾಂದಲಪಟ್ಟಿ ರಸ್ತೆಯಲ್ಲೇ ಈ ಗ್ಲಾಸ್ ಬ್ರಿಡ್ಜ್ ಇದೆ. ಪ್ರವಾಸಿಗರಿಗೆ ತಲಾ 300 ರು. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ..................
ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕಗ್ಲಾಸ್ ಬ್ರಿಡ್ಜ್ ನಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ. ಕೊಡಗಿನ ಬಹುತೇಕ ಪ್ರವಾಸಿ ತಾಣಗಳು ನೈಸರ್ಗಿಕದತ್ತವಾಗಿದೆ. ಇದೀಗ ಪ್ರಕೃತಿ ಸೌಂದರ್ಯದ ನಡುವೆ ಮಾನವ ನಿರ್ಮಿತ ಗ್ಲಾಸ್ ಬ್ರಿಡ್ಜ್ ಕೂಡ ಜಿಲ್ಲೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಇದನ್ನು ವೀಕ್ಷಿಸಲೆಂದೇ ಜಿಲ್ಲೆಗೆ ದೇಶದ ನಾನಾ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸುತ್ತಲೂ ಹಚ್ಚ ಹಸಿರಿನ ವಾತಾವರಣ ಪ್ರವಾಸಿಗರನ್ನು ಸೆಳೆಯಲಿದೆ.
................
ಕೊಡಗಿನ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ದಕ್ಷಿಣ ಭಾರತದ ಎರಡನೇ ಅತಿ ದೊಡ್ಡ ಗ್ಲಾಸ್ ಬ್ರಿಡ್ಜ್ ಇದಾಗಿದ್ದು, 5ರಂದು ಉದ್ಘಾಟನೆಯಾಗಲಿದೆ. ಸ್ಥಳೀಯರಿಗೆ ಕೆಲಸದಲ್ಲಿ ಆದ್ಯತೆ ನೀಡಲಾಗುತ್ತದೆ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಕಾರ ನೀಡಬೇಕು.-ರಾಜೇಶ್ ಯಲ್ಲಪ್ಪ, ಉದ್ಯಮಿ ಮಡಿಕೇರಿ.