ಆರ್‌.ಆರ್‌.ನಗರದಲ್ಲಿ ಮತ್ತೊಂದು ಗುರುತಿನ ಚೀಟಿ ಸಂಗ್ರಹ ಬೆಳಕಿಗೆ; ಇಬ್ಬರ ಬಂಧನ

| Published : Apr 19 2024, 01:06 AM IST

ಆರ್‌.ಆರ್‌.ನಗರದಲ್ಲಿ ಮತ್ತೊಂದು ಗುರುತಿನ ಚೀಟಿ ಸಂಗ್ರಹ ಬೆಳಕಿಗೆ; ಇಬ್ಬರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಯಶವಂತಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಯಶವಂತಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ವಾರ್ಡ್‌ನ ಡಾ। ಬಿ.ಆರ್‌.ಅಂಬೇಡ್ಕರ್‌ ಬಡಾವಣೆಯ ಸುಣ್ಣದಗೂಡು ಕೊಳಗೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರ ಗುರುತಿನ ಚೀಟಿ ಸಂಗ್ರಹಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಕಾರ್ಯಕರ್ತರು ಕೊಳಗೇರಿಗೆ ತೆರಳಿ ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟುಕೊಂಡಿದ್ದವರನ್ನು ಪತ್ತೆ ಮಾಡಿ ಸ್ಥಳೀಯವಾಗಿ ನೇಮಕವಾಗಿರುವ ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಚುನಾವಣಾಧಿಕಾರಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮತದಾರರ ಗುರುತಿನ ಚೀಟಿ ಸಂಗ್ರಹಿಸಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆ ವಿಡಿಯೋ ಹಾಗೂ ಚುನಾವಾಣಧಿಕಾರಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಯಶವಂತಪುರ ಪೊಲೀಸರು ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾದ ವೆಂಕಟೇಶ್‌ ಮತ್ತು ಸ್ಟಾಲಿನ್‌ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರಿಂದ ಪೊಲೀಸರು ಕೆಲ ಮತದಾರರ ಗುರುತಿನ ಚೀಟಿಯನ್ನೂ ವಶಕ್ಕೆ ಪಡೆದಿದ್ದಾರೆ.

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್‌ಮೆಂಟೊಂದರಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟಿದ್ದ ಪ್ರಕರಣ ಪತ್ತೆಯಾಗಿತ್ತು. ಇದೀಗ ಅದೇ ಮಾದರಿಯ ಪ್ರಕರಣವೊಂದು ಮತ್ತೊಮ್ಮೆ ಬೆಳಕಿಗೆ ಬಂದಿದೆ.