ಸಾರಾಂಶ
ಮುಡಾ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಹೈಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಆದೇಶ ನೀಡುವ ಕುರಿತು ಕಾಯ್ದಿರಿಸಿರುವ ತೀರ್ಪು ಬುಧವಾರ ಪ್ರಕಟವಾಗುವ ಸಾಧ್ಯತೆ ಇದೆ.
ಕನ್ನಡಪ್ರಭ ವಾರ್ತೆ ಬೆಂಗಳೂರುಮುಡಾ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಹೈಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಆದೇಶ ನೀಡುವ ಕುರಿತು ಕಾಯ್ದಿರಿಸಿರುವ ತೀರ್ಪು ಬುಧವಾರ ಪ್ರಕಟವಾಗುವ ಸಾಧ್ಯತೆ ಇದೆ.
ಹೀಗಾಗಿ, ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಂಭವವಿದೆ.ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ದೂರಿನ ವಿಚಾರಣೆ ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ರಾಜ್ಯಪಾಲರ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತನ್ನ ವಿಚಾರಣೆ ಮುಕ್ತಾಯವಾಗುವವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿರುವ ತೀರ್ಪಿಗೆ ತಡೆ ನೀಡಿತ್ತು.ಮಂಗಳವಾರ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಕಾಯ್ದಿರಿಸಿರುವ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ. ಒಂದು ವೇಳೆ ಮುಖ್ಯಮಂತ್ರಿಗಳು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಕೆಳ ನ್ಯಾಯಾಲಯ ಕಾಯ್ದಿರಿಸಿರುವ ತೀರ್ಪಿಗೆ ತಡೆ ತಂದರೆ ಮಾತ್ರ ವಿಚಾರಣೆಗೆ ಆದೇಶ ನೀಡುವುದಕ್ಕೆ ತಡೆ ಸಿಗಲಿದೆ. ಇಲ್ಲದಿದ್ದರೆ ಕೆಳ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸುವ ನಿರೀಕ್ಷೆ ಇದೆ.ಬುಧವಾರ ಮಧ್ಯಾಹ್ನ ಕೆಳ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಲಿದೆ. ಅಷ್ಟರೊಳಗೆ ಮುಖ್ಯಮಂತ್ರಿಗಳು ಮೇಲ್ಮನವಿ ಸಲ್ಲಿಸಿ ತಡೆ ತರಬೇಕಾಗಿದೆ. ಇಲ್ಲದಿದ್ದರೆ ವಿಚಾರಣೆ ನಡೆಸುವ ಸಂಬಂಧ ತನಿಖಾ ಸಂಸ್ಥೆಗೆ ನ್ಯಾಯಾಲಯವು ಸ್ವಾಯತ್ತ ತನಿಖಾ ಸಂಸ್ಥೆಯಾದ ಲೋಕಾಯುಕ್ತಕ್ಕೆ ಸೂಚನೆ ನೀಡುವ ಸಾಧ್ಯತೆ ಇದೆ. ಜೊತೆಗೆ, ತನಿಖೆಗೆ ನಿರ್ದಿಷ್ಟ ಗಡುವು ವಿಧಿಸುವ ಸಾಧ್ಯತೆಯೂ ಇದೆ. ವಿಚಾರಣೆ ನಡೆಸಲು ನ್ಯಾಯಾಲಯವು ಸೂಚಿಸುವ ತನಿಖಾ ಸಂಸ್ಥೆಯು ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲಿದೆ.