ಒಕ್ಕಲಿಗರ ಸಂಘದಲ್ಲಿ ಮತ್ತೆ ಬಿರುಕು

| Published : Oct 04 2024, 01:07 AM IST

ಸಾರಾಂಶ

ಒಂದು ವರ್ಷ ನಮಗೆ ಅವಕಾಶ ನೀಡಿ, ನಾವು ತಪ್ಪು ಮಾಡಿದರೆ ನಮ್ಮ ವಿರುದ್ಧ ಅವಿಶ್ವಾಸ ಮಂಡಿಸಿ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್‌.ಬಾಲಕೃಷ್ಣ ಬಣದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪದೇ ಪದೇ ಅವಿಶ್ವಾಸ ನಿರ್ಣಯ ತಂದು ಸಂಘದ ವರ್ಚಸ್ಸಿಗೆ ಮತ್ತು ಅಭಿವೃದ್ಧಿಗೆ ತೊಡಕಾಗಬೇಡಿ. ಒಂದು ವರ್ಷ ನಮಗೆ ಅವಕಾಶ ನೀಡಿ, ನಾವು ತಪ್ಪು ಮಾಡಿದರೆ ನಮ್ಮ ವಿರುದ್ಧ ಅವಿಶ್ವಾಸ ಮಂಡಿಸಿ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್‌.ಬಾಲಕೃಷ್ಣ ಬಣದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಮನವಿ ಮಾಡಿದ್ದಾರೆ.

ಈ ಮಧ್ಯೆ, ಸಂಘದ ಹೊಸ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆಯಾದ ಒಂದು ವರ್ಷದ ವರೆಗೆ ಅವಿಶ್ವಾಸ ಮಂಡಿಸದಂತೆ ಬೈಲಾಗೆ ತಿದ್ದುಪಡಿ ತರುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕೂಡ ಸಂಘ ಕಾಯೋನ್ಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಾಧ್ಯಕ್ಷ ಆರ್‌.ಪ್ರಕಾಶ್‌, ಗೌರವಾಧ್ಯಕ್ಷ ಎಂ.ಪುಟ್ಟಸ್ವಾಮಿ ಮತ್ತಿತರರು, ಒಕ್ಕಲಿಗರ ಸಂಘಕ್ಕೆ ತನ್ನದೇ ಆದ ಘನತೆ ಇದ್ದು, ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದನ್ನು ಪದೇ ಪದೇ ಅವಿಶ್ವಾಸ ತರುವ ಮೂಲಕ ಹಾಳು ಮಾಡಬೇಡಿ. ಅಧಿಕಾರ ನೀಡಿ ತಿಂಗಳಾಗಿಲ್ಲ ಆಗಲೇ ಅವಿಶ್ವಾಸ ಮಂಡಿಸಿದರೆ ಏನರ್ಥ. ಕನಿಷ್ಠ ಒಂದು ವರ್ಷ ಅವಕಾಶ ನೀಡಿ. ಆ ಅವಧಿಯಲ್ಲಿ ನಾವು ಸಂಘದ ಬೈಲಾ ಅನುಸಾರ ನಡೆದುಕೊಳ್ಳದೆ ತಪ್ಪು ಮಾಡಿದರೆ ನಿಯಮಗಳನ್ನು ಉಲ್ಲಂಘಿಸಿದರೆ ಅವಿಶ್ವಾಸ ಮಂಡಿಸಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದರು.

ಕಳೆದ ಜು.4ರಂದು ಸಂಘದ ನೂತನ ಅಧ್ಯಕ್ಷರಾಗಿ ಸಿ.ಎನ್‌.ಬಾಲಕೃಷ್ಣ ಹಾಗೂ ಅವರ ತಂಡದವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರು. ಇದಾದ ಕೇವಲ 14 ದಿನಕ್ಕೇ ಎದುರಾಳಿ ತಂಡವು ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್‌ ನೀಡಿದ್ದರು. ಆದರೆ, ಸಂಘದ ಕಾರ್ಯಕಾರಿ ಸಮಿತಿ ಈ ನೋಟಿಸ್‌ ತಿರಸ್ಕರಿಸಿತ್ತು. ಮತ್ತೆ ಜು.30ಕ್ಕೆ ಸಭೆ ನಡೆಸಿ ಕೆಲ ಸದಸ್ಯರು ಆ.9ಕ್ಕೆ ತಾವೇ ಅವಿಶ್ವಾಸ ನಿರ್ಣಯದ ಸಭೆ ನಡೆಸುವುದಾಗಿ ನೋಟಿಸ್‌ ನೀಡಿದ್ದರು. ಇದನ್ನು ಹಾಲಿ ಪದಾಧಿಕಾರಿಗಳು ನಗರದ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಿದೆ. ಇದನ್ನು ಪ್ರಶ್ನಿಸಿ ವಿರೋದಿ ಬಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅವರ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದೆ. ಇದು ಹೀಗೇ ಮುಂದುವರೆದರೆ ಸಂಘದ ಘಟತೆ, ಗೌರವಕ್ಕೆ ಧಕ್ಕೆಯಾಗಲಿದ್ದು ಉಭಯ ಬಣಗಳು ಸಮನ್ವಯದ ಮೂಲಕ ಸಂಘದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಈ ಮಧ್ಯೆ, ಸಂಘದ ಹೊಸ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆಯಾದ ಒಂದು ವರ್ಷದ ವರೆಗೆ ಅವಿಶ್ವಾಸ ಮಂಡಿಸದಂತೆ ಬೈಲಾಗೆ ತಿದ್ದುಪಡಿ ತರುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕೂಡ ಸಂಘ ಕಾಯೋನ್ಮುಖವಾಗಿದೆ ಎಂದು ಅವರು ತಿಳಿಸಿದರು.