ಧಾರವಾಡ:

ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಲಕ್ಷಾಂತರ ಹುದ್ದೆಗಳ ಭರ್ತಿಗಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಫೆ. 24ರಂದು ಧಾರವಾಡದಲ್ಲಿ ಮತ್ತೊಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿದ್ಯಾರ್ಥಿ ಸಂಘಟನೆ ಮುಖಂಡ ಕಾಂತಕುಮಾರ, ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ಮೂರು ವರ್ಷಗಳಾದರೂ ಯಾವುದೇ ಹುದ್ದೆ ತುಂಬದೇ ಬರೀ ಭರವಸೆ ಹಾಗೂ ಸುಳ್ಳು ಹೇಳಿಕೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಾರಿ ಹೋರಾಟ, ಪ್ರತಿಭಟನೆಗಳಾಗಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ನೇಮಕಾತಿ ಇಲ್ಲದೇ ಆಕಾಂಕ್ಷಿಗಳು ಮಾತ್ರವಲ್ಲದೇ ಆಡಳಿತ ವ್ಯವಸ್ಥೆ ಕುಸಿಯುತ್ತಿದ್ದು ಜನರಿಗೂ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆ. 24ರಂದು ಇಲ್ಲಿನ ಶ್ರೀನಗರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಹೋರಾಟ ಮಾಡಲಾಗುವುದು. ಫೆ. 25ರಿಂದ ನೇಮಕಾತಿ ಆಗುವ ವರೆಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಸ್ವಯಂ ಪ್ರೇರಿತರಾಗಿ ಬನ್ನಿ:

ವೈಯಕ್ತಿಕ ಕಾರಣಕ್ಕಾಗಿ ನಡೆಯುತ್ತಿರುವ ಹೋರಾಟದ ಇದಲ್ಲ, ಈ ಹಿನ್ನೆಲೆಯಲ್ಲಿ ಧಾರವಾಡ ಮಾತ್ರವಲ್ಲದೇ ಇಡೀ ರಾಜ್ಯದ ಎಲ್ಲ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಕೈ ಜೋಡಿಸಬೇಕು. ಇನ್ನು, ಸರ್ಕಾರದ ಕಿವಿ ಹಿಂಡಿ ನೇಮಕಾತಿ ತುಂಬಿಕೊಳ್ಳುವ ಜವಾಬ್ದಾರಿ ಪ್ರತಿ ಪಕ್ಷದ್ದಾಗಿದ್ದು, ಬರೀ ಸದನದಲ್ಲಿ ಮಾತನಾಡುವುದಲ್ಲದೇ ವಿಪಕ್ಷ ನಾಯಕರು ವಿದ್ಯಾರ್ಥಿಗಳೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕೆಂದು ಕಾಂತಕುಮಾರ ಆಗ್ರಹಿಸಿದರು.


24ರ ಹೋರಾಟಕ್ಕೆ ಪೊಲೀಸ್‌ ಇಲಾಖೆಯ ಪರವಾನಗಿ ಕುರಿತ ಪ್ರಶ್ನೆಯೊಂದಕ್ಕೆ, ಸುಮಾರು 2 ಸಾವಿರ ವಿದ್ಯಾರ್ಥಿಗಳು ಸೇರಿ ಪ್ರತಿಭಟಿಸುವುದಾಗಿ ಪೊಲೀಸ್‌ ಇಲಾಖೆಯ ಪರವಾನಗಿ ಕೋರಿದ್ದು, ನೀಡುವ ಭರವಸೆ ಇದೆ. ಒಂದು ವೇಳೆ ಪರವಾನಗಿ ಕೊಡದೇ ಇದ್ದರೂ ಈ ಬಾರಿ ಹೋರಾಟ ನಿಶ್ಚಿತ ಎಂದು ಕಾಂತಕುಮಾರ ಉತ್ತರಿಸಿದರು.

ಕೇಂದ್ರದಲ್ಲೂ ಖಾಲಿ ಇವೆ:

ಬರೀ ರಾಜ್ಯ ಸರ್ಕಾರ ಮಾತ್ರವಲ್ಲದೇ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲೂ ಹುದ್ದಗಳು ಖಾಲಿ ಇವೆ. ಜತೆಗೆ ಅಲ್ಲಿಯ ಹುದ್ದೆಗಳು ಹೆಚ್ಚಾಗಿ ಉತ್ತರ ಭಾರತದವರ ಪಾಲಾಗುತ್ತಿದ್ದು, ರಾಜ್ಯಕ್ಕೆ ಇಷ್ಟು ಹುದ್ದೆ ಎಂದು ಮೀಸಲಾತಿ ನೀಡಬೇಕೆಂಬ ಹೋರಾಟಕ್ಕೂ ತಾವು ಬರುವ ದಿನಗಳಲ್ಲಿ ಸಿದ್ಧತೆ ನಡೆಸಿದ್ದೇವೆ ಎಂದು ಕಾಂತಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ತೇಲಿ, ಸಂಜಯಕುಮಾರ, ಮಂಜುನಾಥ ಹಾಗೂ ವಿದ್ಯಾರ್ಥಿ ಮುಖಂಡರಿದ್ದರು.