ಸಾರಾಂಶ
ಕಳೆದ 7 ದಿನ ಉಕ್ಕೇರಿ ಅಬ್ಬರಿಸಿದ್ದ ಭೀಮಾ ನದಿ ಎರಡು ದಿನ ಶಾಂತವಾಗಿತ್ತು ಎಂದು ನದಿ ತೀರದ ಜನ ನಿಟ್ಟುಸಿರು ಬಿಡುವ ಮುನ್ನವೇ ಮತ್ತೆ ನದಿಗೆ ಅಪಾರ ಜಲರಾಶಿ ಹರಿದು ಬರುತ್ತಿದೆ. ಇದರಿಂದಾಗಿ ಮತ್ತೆ ನದಿ ತೀರದ ಊರುಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಕಳೆದ 7 ದಿನ ಉಕ್ಕೇರಿ ಅಬ್ಬರಿಸಿದ್ದ ಭೀಮಾ ನದಿ ಎರಡು ದಿನ ಶಾಂತವಾಗಿತ್ತು ಎಂದು ನದಿ ತೀರದ ಜನ ನಿಟ್ಟುಸಿರು ಬಿಡುವ ಮುನ್ನವೇ ಮತ್ತೆ ನದಿಗೆ ಅಪಾರ ಜಲರಾಶಿ ಹರಿದು ಬರುತ್ತಿದೆ. ಇದರಿಂದಾಗಿ ಮತ್ತೆ ನದಿ ತೀರದ ಊರುಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ.ಈಗಾಗಲೇ 2-3 ಬಾರಿ ಅಪಾರ ಪ್ರಮಾಣದ ನೀರು ಹರಿದು ಉಕ್ಕೇರಿದ್ದ ಭೀಮೆ ಇದೀಗ ಇನ್ನೊಂದು ಸುತ್ತಿನ ಭಾರಿ ಪ್ರಮಾಣದಲ್ಲಿ ನೀರನ್ನು ಹೊತ್ತು ಅಬ್ಬರಿಸಲು ಸಿದ್ಧವಾಗಿದೆ.
ಮಹಾರಾಷ್ಟ್ರದ ಭೀಮಾ ನದಿ ಪಾತ್ರದ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಉಜನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಹಾಗೂ ಶೀನಾ ನದಿಯಿಂದ 1.49 ಲಕ್ಷ ಕ್ಯುಸೆಕ್ ನೀರು ಹರಿದು ಬಿಡಲಾಗಿದ್ದು, ತಾಲೂಕಿನಲ್ಲಿ,ಭೀಮಾ ನದಿಗೆ ಸೇರುವ ಬೋರಿ ಹಳ್ಳಕ್ಕೂ ಕೂಡ ಅಪಾರ ಪ್ರಮಾಣದಲ್ಲಿ ನೀರು ಬಂದಿರುವುದರಿಂದ ನದಿ ದಂಡೆಯಲ್ಲಿರುವ ಗ್ರಾಮಸ್ಥರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.ಉಜನಿ ಜಲಾಶಯ, ಶೀನಾ ನದಿಯಿಂದ ಭೀಮಾ ನದಿಗೆ ಬಿಟ್ಟಿರುವ ಲಕ್ಷಾಂತರ ಪ್ರಮಾಣದ ನೀರು ಸೋಮವಾರ ಬೆಳಿಗ್ಗೆ ತಾಲೂಕಿನ ಭೀಮಾ ನದಿಗೆ ಬಂದು ತಲುಪಲಿದೆ. ಈಗಾಗಲೇ ಎರಡು ಮೂರು ಬಾರಿ ಅಪಾರ ಪ್ರಮಾಣದ ನೀರು, ನದಿಯಲ್ಲಿ ಹರಿದು ನದಿ ಪಾತ್ರದಲ್ಲಿರುವ ಹಾಗೂ ತಗ್ಗು ಪ್ರದೇಶದಲ್ಲಿರುವ ಸಾವಿರಾರು ಎಕರೆ ಬೆಳೆಗಳು ನಾಶವಾಗಿ ಹೋಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಈಗ ಮತ್ತೆ ನದಿಯಲ್ಲಿ ಲಕ್ಷಾಂತರ ಪ್ರಮಾಣದ ನೀರು ಬರುತ್ತಿರುವುದು ನದಿ ಪಾತ್ರದ ಗ್ರಾಮಗಳ ಜನರಿಗೆ ಆತಂಕವನ್ನು ಉಂಟು ಮಾಡಿದೆ. ತಾಲೂಕಿನ ಮಣ್ಣೂರ, ಶೇಷಗಿರಿ, ಕುಡಗನೂರ, ಶಿವೂರ, ಉಡಚಣ, ಉಡಚಣಹಟ್ಟಿ, ಭೊಸಗಾ, ದುದ್ದುಣಗಿ, ಮಂಗಳೂರ, ಹಿರಿಯಾಳ, ಅಳ್ಳಗಿ, ಬಿ ಹವಳಗಾ, ಘತ್ತರಗಾ, ಹಿಂಚಗೇರಾ, ಬಟಗೇರಾ, ತೆಲ್ಲೂರ, ದೇವಲ, ಗಾಣಗಾಪುರ, ಬಂದರವಾಡ, ಹಸರಗುಂಡಗಿ, ಕೆರಕನಳ್ಳಿ, ತೆಗ್ಗಳ್ಳಿ ಸೇರಿದಂತೆ ಸುಮಾರು 40 ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಿದೆ.ಸೊನ್ನ ಬ್ಯಾರೇಜ್‌ಗೆ ಸಾವಿರ ಒಳ ಹರಿವು ಹೆಚ್ಚಾಗಿದೆ. ಹೊರಹರಿವಿನ ಪ್ರಮಾಣ ಜಾಸ್ತಿಯಾಗುವುದರಿಂದ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ಜನ ಜಾನುವಾರು ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕೆಂದು ಕೆಎನ್‌ಎನ್‌ಎಲ್ ಎಇಇ ಸಂತೋಷಕುಮಾರ ಸಜ್ಜನ ಹೇಳಿದ್ದಾರೆ.
;Resize=(128,128))
;Resize=(128,128))
;Resize=(128,128))