ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ಸಿನಲ್ಲಿ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪುತ್ರ ಇಮ್ತಿಯಾಜ್ ಅನ್ಸಾರಿ ಅವರನ್ನು ಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಸಲು ಪ್ರಯತ್ನ ನಡೆದಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಜಿಲ್ಲೆಯ ಕಾಂಗ್ರೆಸ್ಸಿನಲ್ಲಿ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪುತ್ರ ಇಮ್ತಿಯಾಜ್ ಅನ್ಸಾರಿ ಅವರನ್ನು ಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಸಲು ಪ್ರಯತ್ನ ನಡೆದಿದೆ.ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಕಾಂಗ್ರೆಸ್ ಕುರಿತು ಮುನಿಸುಕೊಂಡ ಬೆನ್ನಲ್ಲೇ ಕೊಪ್ಪಳದ ಕೆಲವು ಮುಸ್ಲಿಂ ಮುಖಂಡರು ಈ ಕಸರತ್ತು ನಡೆಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್-2 ನೇಮಕ ಅಧಿಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ನೀಡುತ್ತಿದ್ದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೆಂಡಾಮಂಡಲರಾಗಿದ್ದಾರೆ. ಹಿಟ್ನಾಳ ಕುಟುಂಬದ ವಿರುದ್ಧ ದಿನೇ ದಿನೇ ಕೆಂಡ ಉಗುಳುತ್ತಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದೇ ಹಿಟ್ನಾಳ ಕುಟುಂಬ, ನನಗೆ ಕಳುಹಿಸಿದ್ದ ಪಾರ್ಟಿ ಫಂಡ್‌ನ್ನು ಹಿಟ್ನಾಳ ಕುಟುಂಬ ನನಗೆ ನೀಡಿಲ್ಲ. ಅಷ್ಟೇ ಅಲ್ಲ, ನನ್ನನ್ನು ಖುದ್ದು ಅವರೇ ಸೋಲಿಸಿದ್ದಾರೆ. ತನ್ಮೂಲಕ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಗೆಲುವಿಗೆ ಕಾರಣವಾಗಿದ್ದಾರೆ ಎಂದು ಕಿಡಿಕಾರಿಕೊಂಡಿದ್ದಾರೆ.
ನನ್ನ ಕ್ಷೇತ್ರದಲ್ಲಿ ಬೂತ್ ಮಟ್ಟದ ಏಜೆಂಟರ್ ನೇಮಕ ಅಧಿಕಾರವನ್ನು ನನಗೆ ಕೊಡುವ ಬದಲು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ನೀಡಿದ್ದರ ಹಿಂದೆಯೂ ಷಡ್ಯಂತ್ರವಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಮೇಲೆಯೂ ಹಿಟ್ನಾಳ ಕುಟುಂಬ ಕಣ್ಣಿಟ್ಟಿದೆ. ಅದಕ್ಕಾಗಿಯೇ ಈಗ ಬೂತ್ ಮಟ್ಟದ ಏಜೆಂಟರ್ ನೇಮಕ ಮಾಡುವ ಮೂಲಕ ಗಂಗಾವತಿ ಕ್ಷೇತ್ರದ ಅಖಾಡಕ್ಕೆ ಭಾರಿ ಕಸರತ್ತು ನಡೆಸಿದೆ ಎನ್ನುವುದು ಅನ್ಸಾರಿ ಬೆಂಬಲಿಗರ ವಾದವಾಗಿದೆ.ಪುತ್ರನಿಗೆ ಆಹ್ವಾನ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪುತ್ರ ಇಮ್ತಿಯಾಜ್ ಅನ್ಸಾರಿ ಅವರನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಸುವ ಮೂಲಕ ಹಿಟ್ನಾಳ ಕುಟುಂಬಕ್ಕೆ ಟಾಂಗ್ ನೀಡುವಂತೆ ಕೊಪ್ಪಳದ ಮುಸ್ಲಿಂ ಮುಖಂಡರಾದ ಅಪ್ಸರಸಾಬ ಹಾಗೂ ಕೆಲವು ಮುಖಂಡರು ಬೆಂಗಳೂರಿನಲ್ಲಿ ಇಕ್ಬಾಲ್ ಅನ್ಸಾರಿ ಅವರನ್ನು ಭೇಟಿಯಾಗಿ, ಪುತ್ರನನ್ನು ಕೊಪ್ಪಳ ಕ್ಷೇತ್ರದಿಂದ ಕಣಕ್ಕೆ ಇಳಿಸುವಂತೆ ಮನವಿ ಮಾಡಿದ್ದಾರೆ.
ಹಿಟ್ನಾಳ ಕುಟುಂಬದಿಂದ ನಿಮಗಷ್ಟೇ ಅಲ್ಲ, ನಮಗೂ ಅನ್ಯಾಯವಾಗಿದೆ. ನೀವು ಮನಸ್ಸು ಮಾಡಿದರೆ ಜೆಡಿಎಸ್‌ಗೆ ಆಗಮಿಸಿ, ಪುತ್ರನನ್ನು ಅಖಾಡಕ್ಕೆ ಇಳಿಸುವ ಮೂಲಕ ಅವರಿಗೆ ಸೆಡ್ಡು ಹೊಡೆಯಬೇಕಾಗಿದೆ. ನಿಮ್ಮನ್ನು ಗಂಗಾವತಿಯಲ್ಲಿ ಸೋಲಿಸಿದ ಅವರಿಗೆ ಪಾಠ ಕಲಿಸಬೇಕು. ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ದೊರೆಯಬೇಕಾದ ಮಾನ್ಯತೆಯೇ ಇಲ್ಲದಂತೆ ಮಾಡುತ್ತಾರೆ ಎಂದು ಹೇಳಿದ್ದಾರೆ.ಇದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು, ಹಿಟ್ನಾಳ ಕುಟುಂಬದ ವಿರುದ್ಧ ನಾನು ಮೊದಲು ಕೆಪಿಸಿಸಿ ಮತ್ತು ಸಿ.ಎಂ. ಸಿದ್ದರಾಮಯ್ಯ ಅವರ ಗಮನಕ್ಕೆ ಎಲ್ಲ ವಿಷಯಗಳನ್ನು ತರುತ್ತೇನೆ. ನನ್ನನ್ನು ಸೋಲಿಸಿದರೂ ನಾನು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೂಚನೆಯಂತೆ ಶಕ್ತಿಮೀರಿ ಕೆಲಸ ಮಾಡಿ, ರಾಜಶೇಖರ ಹಿಟ್ನಾಳ ಅವರು ಗೆಲ್ಲುವಂತೆ ಮಾಡಿದ್ದೇನೆ. ಆದರೂ ನನಗೆ ಮತ್ತೆ ಮತ್ತೆ ಮೋಸ ಮಾಡುತ್ತಲೇ ಇದ್ದಾರೆ. ಪಕ್ಷದಲ್ಲಿ ನನಗೆ ಸೂಕ್ತ ಸ್ಥಾನ ದೊರೆಯದಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ನನ್ನನ್ನು ಕಡೆಗಣಿಸುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸದೇ ಇದ್ದರೆ ನನ್ನ ದಾರಿ ನಾನು ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳುತ್ತೇನೆ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ, ಆನಂತರ ಮುಂದಿನ ವಿಚಾರ ಮಾಡೋಣ ಎಂದು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.
ಸಂಚಲನ ಮೂಡಿಸಿದ ಬೆಳವಣಿಗೆ: ಈ ಬೆಳವಣಿಗೆ ಕೇವಲ ಕಾಂಗ್ರೆಸ್ಸಿನಲ್ಲಿ ಅಷ್ಟೇ ಅಲ್ಲ, ಬಿಜೆಪಿ, ಜೆಡಿಎಸ್ ಸೇರಿದಂತೆ ಕೊಪ್ಪಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. 2028 ಚುನಾವಣೆಯನ್ನೇ ಲೆಕ್ಕದಲ್ಲಿಟ್ಟುಕೊಂಡು ಜೆಡಿಎಸ್‌ಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಆಹ್ವಾನಿಸುವ ಕಸರತ್ತು ನಡೆದಿದೆ. ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವ ಬೀರಬಹುದಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನಡೆಯನ್ನು ಇತರೆ ಪಕ್ಷಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.ಬೆಂಬಲಿಗರ ಪೋಸ್ಟ್: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಅವಮಾನ ಆಗಿರುವುದರಿಂದ ಕೊಪ್ಪಳ ಕ್ಷೇತ್ರದಿಂದ ಅವರ ಪುತ್ರನನ್ನು ಸ್ಪರ್ಧೆಗೆ ಇಳಿಸುವಂತೆ ಅನ್ಸಾರಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಇಮ್ತಿಯಾಜ್ ಪರವಾಗಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.